ಸಾವಿರಾರು ಕೋಟಿ ಸಾಲ ಮಾಡಿ ದೇಶ ಬಿಟ್ಟು ಓಡಿಹೋದವರನ್ನ ಹಿಡಿಯೋಕೆ ಆಗದ ಬ್ಯಾಂಕುಗಳು, ಬಡ ರೈತರು ಪೈಸೆ ಲೆಕ್ಕ ಬಾಕಿ ಇಟ್ಟುಕೊಂಡ್ರೆ ಸಾಕು ಹೇಗೆ ಬೆನ್ನುಬೀಳ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಕೇವಲ 9 ರೂಪಾಯಿ 34 ಪೈಸೆ ಬಾಕಿ ಇದೆ ಅಂತ ಕಾಫಿ ಬೆಳೆಗಾರನಿಗೆ ಬ್ಯಾಂಕ್ ಕಾಲ್ ಮಾಡಿದೆ. ಅದಕ್ಕೆ ಸಿಟ್ಟಿಗೆದ್ದ ಬೆಳೆಗಾರ ಮಾಡಿದ್ದೇನು ಗೊತ್ತಾ? 10 ರೂಪಾಯಿ ಕಟ್ಟಿ 66 ಪೈಸೆ ವಾಪಸ್ ಕೊಡಿ ಅಂತ ಪಟ್ಟು ಹಿಡಿದಿದ್ದಾರೆ!
ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಇಂತಹದೊಂದು ವಿಚಿತ್ರ ಸನ್ನಿವೇಶ ನಡೆದಿದೆ. ಕಾಫಿ ಬೆಳೆಗಾರ ಚೊಕ್ಕಣ್ಣಗೌಡ ಅವರು ವರ್ಷಗಳ ಹಿಂದೆ 50 ಸಾವಿರ ಲೋನ್ ಪಡೆದಿದ್ದರು. ಅದನ್ನು ಬಡ್ಡಿ ಸಮೇತ ಕಟ್ಟಿ ಕ್ಲಿಯರ್ ಕೂಡ ಮಾಡಿದ್ದರು. ಆದರೆ ನಿನ್ನೆ ಏಕಾಏಕಿ ಬ್ಯಾಂಕ್ನಿಂದ ಕಾಲ್ ಬಂದಿದೆ. ನಿಮ್ಮ ಖಾತೆಯಲ್ಲಿ ಇನ್ನು 9 ರೂಪಾಯಿ 34 ಪೈಸೆ ಬಾಕಿ ಇದೆ, ತಕ್ಷಣ ಬಂದು ಕಟ್ಟಿ ಅಂತ ಸಿಬ್ಬಂದಿ ಸೂಚಿಸಿದ್ದಾರೆ.
ಇದರಿಂದ ಕೆರಳಿದ ಚೊಕ್ಕಣ್ಣಗೌಡ ಅವರು ನೇರವಾಗಿ ಬ್ಯಾಂಕ್ಗೆ ಬಂದು 10 ರೂಪಾಯಿ ಕಟ್ಟಿ ರಸೀದಿ ಪಡೆದಿದ್ದಾರೆ. ಆದರೆ ಅಲ್ಲಿಗೆ ಸುಮ್ಮನಾಗದ ಅವರು, ನನ್ನ ಸಾಲ 9 ರೂಪಾಯಿ 34 ಪೈಸೆ ಅಂದಮೇಲೆ, ನಾನು ಕೊಟ್ಟ 10 ರೂಪಾಯಿಯಲ್ಲಿ ಉಳಿದ 66 ಪೈಸೆ ವಾಪಸ್ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
ಸಾವಿರಾರು ಕೋಟಿ ಲೂಟಿ ಮಾಡಿದವರನ್ನ ಬಿಟ್ಟು, ರೈತರಿಗೆ ಪೈಸೆ ಲೆಕ್ಕದಲ್ಲಿ ತೊಂದರೆ ಕೊಡ್ತೀರಾ ಅಂತ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಹಕನ ಪ್ರಶ್ನೆಗೆ ಉತ್ತರಿಸಲಾಗದ ಅಧಿಕಾರಿಗಳು, ಇದು ಕಂಪ್ಯೂಟರೈಸ್ಡ್ ಟೆಲಿಕಾಲ್ ನಿಂದ ಆದ ತಪ್ಪು ಎಂದು ಸಬೂಬು ಹೇಳಿ ಕಳುಹಿಸಿದ್ದಾರೆ. ಡಿಜಿಟಲ್ ಕಾಲದಲ್ಲಿ ಬ್ಯಾಂಕುಗಳ ಈ ಯಾಂತ್ರಿಕ ನಡೆ ಮತ್ತು ರೈತರ ಮೇಲಿನ ಈ ಕಿರುಕುಳ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ : ಲಾವಣ್ಯ ಅನಿಗೋಳ




