ಕುಣಿಗಲ್ ತಾಲ್ಲೂಕಿನ ಹಿತ್ತಾಪುರ ಗ್ರಾಮದಲ್ಲಿ ಕಲ್ಲುಗಣಿಗಾರಿಕೆ ಅನುಮತಿ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕುಣಿಗಲ್ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.
ಹಿತ್ತಾಪುರ ಗ್ರಾಮದ ಸರ್ವೆ ನಂಬರ್ 52ರಲ್ಲಿ ಕಲ್ಲುಗಣಿಗಾರಿಕೆಗೆ ತಾಲೂಕು ಆಡಳಿತ ಅನುಮತಿ ನೀಡಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಉಜಿನಿ ಚೌಡೇಶ್ವರಿ ದೇವಸ್ಥಾನಕ್ಕೆ ಸೇರಿದ ಬೆಟ್ಟ ಪ್ರದೇಶವಾಗಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಪ್ರತಿಭಟನಾಕಾರರು, ಈ ಬೆಟ್ಟ ಪ್ರದೇಶದಲ್ಲಿ ಸಿದ್ದರ ಸ್ಥಳ, ಮುದ್ರಾಸ್ವಾಮಿ ಗುಹೆಗಳು ಸೇರಿದಂತೆ ಪವಿತ್ರ ಹಾಗೂ ಪುರಾತನ ಸ್ಥಳಗಳಿದ್ದು, ಇವುಗಳನ್ನು ನಾಶಪಡಿಸಲು ಆಡಳಿತ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ರಾತ್ರೋರಾತ್ರಿ ಗ್ರಾಮದಲ್ಲಿ ಸರ್ವೆ ಕಾರ್ಯ ನಡೆಸಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿದ ರೈತರು ಮತ್ತು ಗ್ರಾಮಸ್ಥರು, ನೂರಾರು ಸಂಖ್ಯೆಯಲ್ಲಿ ತಾಲ್ಲೂಕು ಕಚೇರಿಗೆ ಆಗಮಿಸಿ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ರೈತ ಮುಖಂಡ ಆನಂದ್ ಹುಲಿಕಟ್ಟೆ ಅವರ ನೇತೃತ್ವದಲ್ಲಿ ನಡೆದ ಈ ಹೋರಾಟಕ್ಕೆ ಜೆಡಿಎಸ್ ಮುಖಂಡ ಜಗದೀಶ್ ನಾಗರಾಜಯ್ಯ ಅವರು ಸಾಥ್ ನೀಡಿದರು. ಕಲ್ಲುಗಣಿಗಾರಿಕೆ ಅನುಮತಿಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




