ಮಂಡ್ಯ: ಜಿಲ್ಲೆಯ ನಾಲೆಗಳಿಗೆ ನೀರು ಬಿಡಲು ಆಗ್ರಹಿಸಿ ಕಳೆದೊಂದು ವಾರದಿಂದ ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಇಂದು ಕೆಆರ್ ಎಸ್ ಅಣೆಕಟ್ಟಿಗೆ ಮುತ್ತಿಗೆ ಹಾಕಿದ್ರು. ಈ ವೇಳೆ ಪೊಲೀಸರು ನೂರಾರು ಮಂದಿ ಪ್ರತಿಭಟನಾನಿರತ ರೈತರನ್ನ ಬಂಧಿಸಿದ್ರು.
ಕಳೆದೊಂದು ವಾರದಿಂದ ಮಂಡ್ಯದ ಕಾವೇರಿ ಭವನದ ಎದುರು ಜಿಲ್ಲೆಯ ಎಲ್ಲಾ ನಾಲೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನೂರಾರು ಮಂದಿ ರೈತರು ಅಹೋರಾತ್ರಿ ಧರಣಿ ಕೈಗೊಂಡಿದ್ರು. ನೀರನ್ನ ನಂಬಿ ಬೆಳೆ ಬೆಳೆದಿರೋ ಜಿಲ್ಲೆಯ ಅನ್ನದಾತರು ಸಂಕಷ್ಟದಲ್ಲಿದ್ದು, ನೀರು ಒದಗಿಸುವಂತೆ ಆಗ್ರಹಿಸಿದ್ರು. ಆದರೆ ಅಣೆಕಟ್ಟಿನಲ್ಲಿರೋದು ಬರೀ 6 ಟಿಎಂಸಿ ನೀರು, ಇಂಥಾದ್ರಲ್ಲಿ ನಾಲೆಗೆ ನೀರು ಬಿಟ್ರೆ ಕುಡಿಯೋ ನೀರಿಗೆ ಸಮಸ್ಯೆ ಆಗಬಹುದೆಂಬ ಕಾರಣಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ನೀರು ಬಿಡಲು ನಿರಾಕರಿಸಿದ್ರು. ಆದ್ರೆ ನಿರ್ವಹಣಾ ಮಂಡಳಿ ನೀರು ಬಳಸಿಕೊಳ್ಳಬೇಡಿ ಎಂದು ಹೇಳಿಲ್ಲ. ನೀರು ಬಿಡಲೇಬೇಕೆಂದು ಆಗ್ರಹಿಸಿ ಇವತ್ತು ಅಣೆಕಟ್ಟೆಗೆ ಮುತ್ತಿಗೆ ಹಾಕಲು ಮಂಡ್ಯದ ಕಾವೇರಿ ಭವನದಿಂದ ಬೈಕ್ ರ್ಯಾಲಿ ಮೂಲಕ ನೂರಾರು ರೈತರು ಕೆಆರ್ ಎಸ್ ಅಣೆಕಟ್ಟೆ ಬಳಿ ಜಮಾಯಿಸಿದ್ರು. ಈ ವೇಳೆ ಮಾತನಾಡಿದ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ, ನಿರ್ವಹಣಾ ಮಂಡಳಿ ಇರೋ ನೀರು ಬಳಸಿಕೊಳ್ಳಬೇಡಿ ಅಂತ ಹೇಳಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಅಣೆಕಟ್ಟಿಗೆ ಮುತ್ತಿಗೆ ಬಳಿಕ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಅರ್ಧ ಗಂಟೆ ಗಡುವು ಕೊಟ್ಟರು. ಆದ್ರೂ ಅಧಿಕಾರಿಗಳು ನೀರು ಬಿಡೋದಕ್ಕೆ ಸುತಾರಾಂ ಒಪ್ಪಲಿಲ್ಲ. ಆಗ ಅಣೆಕಟ್ಟೆಗೆ ನುಗ್ಗಲು ಯತ್ನಿಸಿದ ನೂರಾರು ಮಂದಿ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಸರ್ಕಾರ, ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿಕೆಶಿ, ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ವಿರುದ್ದ ಪ್ರತಿಭಟನಾಕಾರರು ಘೋಷಣೆ ಕೂಗಿದ್ರು.
ಒಟ್ಟಾರೆ ಕಳೆದೊಂದು ವಾರದಿಂದ ಪ್ರತಿಭಟನೆ ಮಾಡಿದ ರೈತರಿಗೆ ಫಲ ಸಿಗಲಿಲ್ಲ. ಕುಡಿಯುವ ನೀರಿಗೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ನೀರು ಬಿಡಲು ಸಾಧ್ಯವಿಲ್ಲ ಅಂತ ಸರ್ಕಾರ ಹೇಳಿದ್ದು, ಮುಂದೆ ಸಮರ್ಪಕವಾಗಿ ಮುಂಗಾರು ಮಳೆ ಬಂದರೆ ಮಾತ್ರ ರೈತರ ಬೆಳೆಗಳಿಗೆ ನೀರು ಸಿಗಲಿದೆ.
ಮಂಡ್ಯದ ಸ್ವಾಭಿಮಾನಿಗಳಿಗೆ ಸುಮಲತಾ ನೀಡಿದ ಭರವಸೆ ಏನು..?ಮಿಸ್ ಮಾಡದೇ ಈ ವಿಡಿಯೋ ನೋಡಿ