ಬೀದರ್‌ನಲ್ಲಿ ಕಬ್ಬು ಬೆಳೆಗೆ ₹3,500 ರಷ್ಟು ದರ ನೀಡುವಂತೆ ರೈತರು ಬೃಹತ್ ಹೋರಾಟ ನಡೆಸಿದರು. ಆದರೆ ಹೋರಾಟದ ವೇಳೆ ಪ್ಲೆಕ್ಸ್ ಬ್ಯಾನರ್ ವಿಚಾರ ಗಲಾಟೆಗೆ ತಿರುಗಿ, ರೈತರು ಹಾಗೂ ಪೊಲೀಸರ ನಡುವೆ ಉದ್ವಿಗ್ನತೆ ಉಂಟಾಯಿತು.
ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮತ್ತು ಈಶ್ವರ ಖಂಡ್ರೆ ಅವರ ಭಾವಚಿತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಹೋರಾಟಕ್ಕೆ ಅನುಮತಿ ಪಡೆದ ರೀತಿಯಲ್ಲೇ ಪ್ರತಿಭಟನೆ ಮಾಡಿ ಎಂದು ಪೊಲೀಸರು ಮನವಿ ಮಾಡಿ, ನಾಯಕರು ಹಾಗೂ ಸಿಎಂ ಅವರ ಭಾವಚಿತ್ರ ಹಿಡಿಯಬಾರದು ಎಂದು ಸೂಚಿಸಿದರು.
ಆದರೆ ರೈತರು ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಎಂಬ ರೀತಿಯಲ್ಲಿ ಭಾವಚಿತ್ರ ಹಿಡಿಯಲು ಮುಂದಾದಾಗ, ಪೊಲೀಸರು ಆ ಭಾವಚಿತ್ರಗಳನ್ನು ತೆಗೆದುಹಾಕಿದರು. ಇದರಿಂದ ಕ್ಷಣಿಕ ಗಲಾಟೆ ಉಂಟಾದರೂ, ಪರಿಸ್ಥಿತಿ ಬಳಿಕ ನಿಯಂತ್ರಣಕ್ಕೆ ಬಂದಿತು.
ಈ ಹೋರಾಟದಲ್ಲಿ ಹುಮನಾಬಾದ್ ಶಾಸಕ ಸಿದ್ದು ಪಾಟೀಲ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ್ ಪಾಟೀಲ್ ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು. ರೈತರು ಕಬ್ಬು ದರ ಏರಿಕೆಗಾಗಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವರದಿ : ಲಾವಣ್ಯ ಅನಿಗೋಳ

