ಜಾತಿಗಣತಿಗೆ ಸಿಎಂ ಸಿದ್ದರಾಮಯ್ಯ, ಟಾರ್ಗೆಟ್ ಮತ್ತು ಡೆಡ್‌ಲೈನ್ ಫಿಕ್ಸ್ ಮಾಡಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗುರುತಿಸಿರುವ ಒಟ್ಟು ಮನೆಗಳಲ್ಲಿ, ಪ್ರತಿ ದಿನ ಶೇಕಡ 10ರಷ್ಟು ಗುರಿ ಸಾಧಿಸಬೇಕು. ಅಕ್ಟೋಬರ್ 7ರೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು. ಅವಧಿ ವಿಸ್ತರಣೆ ಮಾಡುವುದಿಲ್ಲ. ಗೈರಾಗುವ ಅಥವಾ ನಿರ್ಲಕ್ಷ್ಯ ತೋರುವ ಅಧಿಕಾರಿ, ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಸರ್ವರ್ ಸಮಸ್ಯೆ, ತಾಂತ್ರಿಕ ದೋಷ ಸೇರಿ ಹಲವು ಕಾರಣಗಳಿಂದಾಗಿ, ಜಾತಿಗಣತಿ ಆಮೆಗತಿಯಲ್ಲಿ ಸಾಗಿದೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಸಿಇಒಗಳು, ಜಿಲ್ಲಾಧಿಕಾರಿಗಳ ಜೊತೆ ಸಿದ್ದರಾಮಯ್ಯ ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಈ ವೇಳೆ ಕೆಲವು ಸೂಚನೆಗಳನ್ನು ಕೊಟ್ಟಿದ್ದಾರೆ. ಸಮೀಕ್ಷೆಯಲ್ಲಿ ಆಗುತ್ತಿರುವ ಗೊಂದಲ ಹಾಗೂ ನಿರ್ಲಕ್ಷ್ಯದ ಬಗ್ಗೆ ತರಾಟೆ ತೆಗೆದುಕೊಂಡಿದ್ದಾರೆ.
ಸಮೀಕ್ಷೆ ಶುರುವಾಗಿ 4 ದಿನವಾದರೂ ತಾಂತ್ರಿಕ ಸಮಸ್ಯೆ, ಸಿಬ್ಬಂದಿ ಗೈರು ಆಗುತ್ತಿರುವುದು ಏಕೆ? ಇದನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸಿಎಂ ತಾಕೀತು ಮಾಡಿದ್ರು.
ರಾಜ್ಯದಲ್ಲಿ ಗುರುತಿಸಿರುವ 1.43 ಕೋಟಿ ಕುಟುಂಬಗಳ ಪೈಕಿ, 2 ಲಕ್ಷದ 76 ಸಾವಿರದ 16 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ಸಮೀಕ್ಷಾ ಕಾರ್ಯಕ್ಕೆ ಒಟ್ಟು 1 ಲಕ್ಷದ 20 ಸಾವಿರದ 728 ಗಣತಿದಾರರನ್ನು ನಿಯೋಜಿಸಲಾಗಿದೆ. ಒಟ್ನಲ್ಲಿ ಜಾತಿಗಣತಿಗೆ ಸಿದ್ದರಾಮಯ್ಯ ಅತೀ ಉತ್ಸಾಹ ತೋರುತ್ತಿದ್ದು, ಮುಂದಿನ ದಿನಗಳಲ್ಲಿ ಅದ್ಯಾವ ತಿರುವು ಪಡೆಯಲಿದೆಯೋ ಕಾದು ನೋಡಬೇಕಿದೆ.

