ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ಹೃದಯ ವಿದ್ರಾವಕ ಘಟನೆ… ಪ್ರೀತಿಯ ಹೆಸರಿನಲ್ಲಿ ನಡೆದ ಕ್ರೂರ ಅಂತ್ಯ, ನಂತರ ನಡೆದ ಆಘಾತಕಾರಿ ಕ್ರಮ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಕೊಲೆಯಾದ ಪ್ರಿಯಕರನ ಶವದ ಮುಂದೆ ಯುವತಿಯೊಬ್ಬಳು ಮದುವೆಯಾಗಿದ್ದಾಳೆ. ತನ್ನ ತಂದೆ ಮತ್ತು ಸಹೋದರರೇ ಆ ಪ್ರಿಯಕರನನ್ನು ಕೊಂದಿದ್ದಾರೆ ಎಂದು ಆ ಯುವತಿ ಆರೋಪಿಸಿದ್ದಾಳೆ.
ಮಹಾರಾಷ್ಟ್ರದ ನಾಂದೇಡ್‌ನಲ್ಲಿ 21 ವರ್ಷದ ಆಂಚಲ್ ಮಾಮಿಡ್ವಾರ್ ತಮ್ಮ ಪ್ರಿಯಕರ 20 ವರ್ಷದ ಸಕ್ಷಮ್ ತಾಟೆ ಅವರ ಶವದೊಂದಿಗೆ ವಿವಾಹವಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೂರು ವರ್ಷಗಳಿಂದ ಸಕ್ಷಮ್ ಜೊತೆ ಸಂಬಂಧ ಹೊಂದಿದ್ದ ಆಂಚಲ್, ಕುಟುಂಬದ ವಿರೋಧದ ನಡುವೆಯೂ ಯುವಕನ ಜೊತೆಗಿನ ಬಾಂಧವ್ಯವನ್ನು ಮುಂದುವರಿಸಿದ್ದರು.
ಪೊಲೀಸ್ ಮಾಹಿತಿ ಪ್ರಕಾರ, ಗುರುವಾರ ಸಂಜೆ ಓಲ್ಡ್ ಗಂಜ್ ಪ್ರದೇಶದಲ್ಲಿ ಸಕ್ಷಮ್ ತನ್ನ ಸ್ನೇಹಿತರ ಜೊತೆ ಇದ್ದಾಗ, ಆಂಚಲ್‌ನ ಸಹೋದರ ಹಿಮೇಶ್ ಮಾಮಿಡ್ವಾರ್ ಜಗಳ ಆರಂಭಿಸಿ ಗುಂಡು ಹಾರಿಸಿದಾನೆ. ಸಕ್ಷಮ್ ಸ್ಥಳದಲ್ಲೇ ಮೃತಪಟ್ಟು, ಹಿಮೇಶ್ ಜೊತೆಗೆ ಆತನ ಸಹೋದರ ಸಾಹೀಲ್ ಮತ್ತು ತಂದೆ ಗಜಾನನ ಮಾಮಿಡ್ವಾರ್‍ರನ್ನು ಪೊಲೀಸರು ಬಂಧಿಸಿದ್ದಾರೆ.
ಸಕ್ಷಮ್ ಅಂತ್ಯಕ್ರಿಯೆಗಾಗಿ ಮನೆಯಲ್ಲೇ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದ ವೇಳೆ, ಸ್ಥಳಕ್ಕೆ ಬಂದ ಆಂಚಲ್ ಶವದ ಮುಂದೆ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದೇನೆ ಎಂದು ಘೋಷಿಸಿದರು. ನನ್ನ ಪ್ರೀತಿ ಅಮರ. ನಾನು ಸಕ್ಷಮ್‌ನ ಪತ್ನಿ ಎಂದು ಹೇಳಿದ ಆಂಚಲ್, ಈ ದೃಶ್ಯ ಸ್ಥಳದಲ್ಲಿದ್ದವರನ್ನು ಬೆಚ್ಚಿಬೀಳಿಸಿತು. ಮಾಧ್ಯಮಗಳ ಮುಂದೆ ಮಾತನಾಡಿದ ಆಂಚಲ್, ಜಾತಿಯ ಕಾರಣಕ್ಕೆ ನನ್ನ ತಂದೆ ನಮ್ಮ ಪ್ರೀತಿಯನ್ನು ವಿರೋಧಿಸುತ್ತಿದ್ದರು. ಬಿಡದಿದ್ದರೆ ಕೊಲ್ಲುವುದಾಗಿ ಬೆದರಿಸಿದ್ದರು. ಅಂತಿಮವಾಗಿ ನನ್ನ ಪ್ರಿಯತಮನನ್ನೇ ಕೊಂದಿದ್ದಾರೆ. ನನಗೆ ನ್ಯಾಯ ಬೇಕು. ನನ್ನ ಅಪ್ಪ ಮತ್ತು ಸಹೋದರರಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಕಣ್ಣೀರು ಹಾಕುತ್ತಾ ಬೇಡಿಕೊಂಡರು.
ಇನ್ನು ಮುಂದೆ ತಾನು ಸಕ್ಷಮ್‌ನ ಮನೆಯಲ್ಲೇ ವಾಸಿಸುವುದಾಗಿ ಆಂಚಲ್ ಸ್ಪಷ್ಟಪಡಿಸಿದ್ದಾರೆ. ಈ ವಿಚಿತ್ರ ಮತ್ತು ವಿಸ್ಮಯಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

