Lucknow: ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಕೆಲಸದ ಒತ್ತಡದಿಂದ ಬಳಲಿ, ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ತಿಂಗಳಲ್ಲಿ ಜಪಾನ್, ಚೀನಾದಲ್ಲಿ ಇಂಥ ನಾಲ್ಕೈದು ಕೇಸ್ ಪತ್ತೆಯಾಗಿತ್ತು. ಭಾರತದಲ್ಲಿ ಓರ್ವ ಯುವತಿ ಕೆಲ ದಿನಗಳ ಹಿಂದಷ್ಟೇ ಕೆಲಸದ ಒತ್ತಡ ತಾಳಲಾರದೇ, ಸಾವನ್ನಪ್ಪಿದ ಘಟನೆ ನಡೆದಿತ್ತು. ಅಲ್ಲದೇ, ಆಕೆಯ ಅಂತ್ಯಸಂಸ್ಕಾರಕ್ಕೆ ಆಕೆಯ ಸಹೋದ್ಯೋಗಿಗಳು ಒಬ್ಬರೂ ಬರಲಿಲ್ಲ.
ಇದೀಗ ಕೆಲಸ ಮಾಡುತ್ತ ಕುಳಿತಿದ್ದ ಜಾಗದಲ್ಲೇ ಮಹಿಳಾ ಅಧಿಕಾರಿ ಪ್ರಾಣಬಿಟ್ಟಿದ್ದಾರೆ. ಸದಾಫ್ ಫಾತೀಮಾ ಎಂಬ ಮಹಿಳಾ ಅಧಿಕಾರಿ ಸಾವನ್ನಪ್ಪಿದವರಾಗಿದ್ದು, ಲಖನೌದಲ್ಲಿ ಈ ಘಟನೆ ನಡೆದಿದೆ. ಸದಾಫ್ ಕೆಲಸ ಮಾಡುತ್ತ ಕುಳಿತ ಕುರ್ಚಿಯಿಂದ ಸಡನ್ನಾಗಿ ಬಿದ್ದಿದ್ದು, ಈಕೆಯ ಸಹೋದ್ಯೋಗಿಗಳು ಈಕೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಆದರೆ, ಆದಾಗಲೇ ಆಕೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಸದಾಫ್ ಫಾತೀಮಾ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಮಹಿಳಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಗೋಮ್ತಿನಗರದ ಬ್ಯಾಂಕ್ ಶಾಖೆಯಲ್ಲಿ ಕೆಲಸ ಮಾಡುವಾಗ, ಈ ದುರ್ಘಟನೆ ಸಂಭವಿಸಿದೆ. ಕೆಲ ದಿನಗಳ ಹಿಂದಷ್ಟೇ ಸಿಎ ಮಾಡಿದ್ದ ಯುವತಿಯೊಬ್ಬಳು, ಆಫೀಸಿನ ಕೆಲಸದ ಒತ್ತಡದಿಂದ ಬಳಲಿ, ಸಾವನ್ನಪ್ಪಿದ್ದಳು. ಜಪಾನ್‌ನಲ್ಲಿ ಸತತ 18 ಗಂಟೆಗಳ ಕಾಲ ಕೆಲಸ ಮಾಡಿದ್ದ ಡಿಲೆವರಿ ಏಜೆಂಟ್, ಬೈಕ್‌ನಲ್ಲಿ ಮಲಗಿದಲ್ಲೇ ಪ್ರಾಣ ಬಿಟ್ಟಿದ್ದ.