ಬೆಂಗಳೂರು: ಹಬ್ಬಗಳ ಹೆಬ್ಬಾಗಿಲು ಎಂದೇ ಕರೆಯಲ್ಪಡುವ ನಾಗರ ಪಂಚಮಿಯನ್ನು ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಆಚರಿಸುತ್ತಾರೆ. ತವರು ಮನೆಯ ಏಳಿಗೆ, ಅಣ್ಣ ತಮ್ಮಂದಿರ ಸುಖ ಸಂತೋಷಕ್ಕೆ ಸಹೋದರಿಯರು ಈ ಹಬ್ಬದ ಮೂಲಕ ಪ್ರಾರ್ಥಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದ ವೃಕ್ಷ ಸಾಂಪ್ರದಾಯಿಕ ಕಲಾಮಂಟಪದಲ್ಲಿ ಶನಿವಾರ ನಡೆದ ‘ನಮ್ಮೂರ ನಾಗಪಂಚಮಿ’ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ನಾಗಪಂಚಮಿಗೆ ಉಂಡಿ ಹಬ್ಬ ಎಂದೂ ಕರೆಯುತ್ತಾರೆ. ಶೇಂಗಾ ಉಂಡೆ, ರವೆ ಉಂಡೆ, ಯಳ್ಳುಂಡೆ, ಒಣ ಕೊಬ್ಬರಿ, ಜೋಳದ ಅರಳು ಇತ್ಯಾದಿಗಳನ್ನು ನಾಗದೇವರಿಗೆ ಅರ್ಪಿಸುತ್ತಾರೆ. ನಮ್ಮ ಉತ್ತರ ಕರ್ನಾಟಕದ ಹೆಣ್ಣುಮಕ್ಕಳಿಗೆ ಈ ಹಬ್ಬ ತುಂಬಾ ಮಹತ್ವ ಎಂದರು.
ನಮ್ಮ ಉತ್ತರ ಕರ್ನಾಟಕದ ಮಂದಿಯ ಮಾತುಗಳು ಒರಟಾಗಿದ್ದರೂ ಮನಸ್ಸು ಬಹಳ ಸೂಕ್ಷ್ಮ ಹಾಗೂ ಮೃದು ಎಂದರು.
ಉತ್ತರ ಕರ್ನಾಟಕದಲ್ಲಿ ನಾಗಪಂಚಮಿ ಹಬ್ಬಕ್ಕೆ ವಿಶೇಷ ಮಾನ್ಯತೆ ಇದೆ. ಪಂಚಮಿ ಹಬ್ಬದ ಸೊಗಡು ಪ್ರತಿ ವರ್ಷ ನಡೆಯುತ್ತದೆ. ಈ ಹಬ್ಬದಲ್ಲಿ ಜೋಕಾಲಿ ಆಡೋದೆ ವಿಶೇಷ ಎಂದು ಹೇಳಿದರು.
ಬೆಂಗಳೂರಿನಲ್ಲಿ ನಮ್ಮತನವನ್ನು ಆಚರಿಸುತ್ತಿರುವ ಆಯೋಜಕರ ಕಾರ್ಯ ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ನನಗ ನೀವೆಲ್ಲ ಸೇರಿ ನಿಜವಾಗಿಯೂ ಇಂದು ತವರು ಮನೆಗೆ ಬಂದ ಅನುಭವ ಮಾಡ್ಸೀರಿ, ನನ್ನಂತ ನೂರಾರು ಮಂದಿ ಹೆಣ್ಮಕ್ಕಳು, ಅಕ್ಕಾ, ತಂಗ್ಯಾರು ಕೆಲಸದ ನಿಮಿತ್ತ ಬೆಂಗಳೂರಿನಲ್ಲಿದ್ರೂ, ಹಬ್ಬಕ್ಕೆಂದು ತವರಿಗೆ ಹೋಗಲಾಗದಿದ್ರೂ, ಉತ್ತರ ಕರ್ನಾಟಕದ ಹಬ್ಬದ ಸಂಭ್ರಮವನ್ನು ಬೆಂಗಳೂರಿಗೇ ಹೊತ್ತು ತರೋ ಮೂಲಕ ತವರು ಮನೆಯನ್ನೇ ಇಲ್ಲಿಗೆ ತಂದಿದ್ದೀರಲ್ಲ ಇದಕ್ಕೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಎಂದು, ಸಚಿವರು ಆಯೋಜಕರ ಕಾರ್ಯವನ್ನು ಶ್ಲಾಘಿಸಿದರು.
ದುಡ್ಡು ಕೊಟ್ಟರೆ ಈ ಬೆಂಗಳೂರಿನಾಗ ಏನ್ ಬೇಕಾದರೂ ಸಿಗತ್ತೆ. ಆದ್ರೆ ನಮ್ಮೂರಿನ ಹಬ್ಬದ ಸಂಭ್ರಮ, ತವರು ಮನೆಯ ಹಬ್ಬದ ಸಂಭ್ರಮ, ಈ ಖುಷಿ ಎಲ್ಲಿ ಸಿಗತೈತಿ.. ಈ ಖುಷಿಗ, ಸಂಭ್ರಮಕ್ಕ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು. ಸಮಾರಂಭದಲ್ಲಿ ಮಾಜಿ ಸಚಿವೆ ಮೋಟಮ್ಮ ಉಪಸ್ಥಿತರಿದ್ದರು.
Chitradurga : ಪರಿಸರ ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರು ಜಾಗೃತಿ ಜಾಥ ಕಾರ್ಯಕ್ರಮ