ರಂಗೇರಿದ ಹಬ್ಬದ ಸೀಸನ್ – ಕಾರ್ ಬುಕ್ಕಿಂಗ್ ನಲ್ಲಿ 50% ಏರಿಕೆ!

ನವರಾತ್ರಿ ಹಬ್ಬದ ಮೊದಲ ದಿನವೇ ಕಾರು ಶೋ ರೂಂಗಳಲ್ಲಿ ಗ್ರಾಹಕರು ಮುಗಿಬಿದ್ದಿದ್ದಾರೆ. ಕಾರಣ GST ಕಡಿತ. ಯಸ್ ಸೆಪ್ಟೆಂಬರ್ 22ಕ್ಕೆ ಹೊಸ GST ದರಗಳು ಜಾರಿಗೆ ಬಂದ ನಂತರ ಕಾರುಗಳ ಬೆಲೆ ಕಡಿತಗೊಂಡಿದೆ. ಸರ್ಕಾರವು ಸಣ್ಣ ಕಾರುಗಳ ಮೇಲಿನ GST ಯನ್ನು ಶೇಕಡಾ 28ರಿಂದ 18ಕ್ಕೆ ಇಳಿಸಿದೆ. ಈ ಹಿನ್ನಲೆಯಲ್ಲಿ ಮಾರುತಿ ಸುಜುಕಿ ಕಾರುಗಳ ಬುಕ್ಕಿಂಗ್‌ನಲ್ಲಿ ಭರ್ಜರಿ ಏರಿಕೆಗೆ ಕಾರಣವಾಗಿದೆ. ಹಬ್ಬದ ಸಮಯ ಮತ್ತು ಕಡಿಮೆ ಬೆಲೆಗಳ ಪರಿಣಾಮ, ಆಟೋಮೊಬೈಲ್ ಉದ್ಯಮಕ್ಕೆ ಉತ್ತಮ ಆರಂಭ ನೀಡಿದೆ.

ಮಾರುತಿ ಸುಜುಕಿ ಸೂಚನೆ ನೀಡಿರುವಂತೆ, ಸೋಮವಾರ ಸಂಜೆಯ ವೇಳೆಗೆ ಚಿಲ್ಲರೆ ಮಾರಾಟ 25,000 ಯುನಿಟ್‌ಗಳನ್ನು ದಾಟಿದೆ. ಈಗಾಗಲೇ 25,000 ಕ್ಕೂ ಹೆಚ್ಚು ಕಾರುಗಳನ್ನು ತಲುಪಿಸಿದ್ದೇವೆ, ಶೀಘ್ರದಲ್ಲೇ ವಿತರಣೆಗಳು 30,000 ತಲುಪುವ ನಿರೀಕ್ಷೆಯಿದೆ. ಹೀಗಂತ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಹೇಳಿದ್ದಾರೆ. ಡೀಲರ್‌ ಶಿಪ್‌ಗಳಲ್ಲಿ 80,000 ಗ್ರಾಹಕರು ವಿಚಾರಣೆ ನಡೆಸಿದ್ದಾರೆ. ಸಣ್ಣ ಕಾರು ಮಾದರಿಗಳ ಬುಕ್ಕಿಂಗ್ ಶೇ. 50ರಷ್ಟು ಹೆಚ್ಚಾಗಿದೆ. ಕೆಲವು ಮಾದರಿಗಳ ಸ್ಟಾಕ್‌ಗಳು ಖಾಲಿಯಾಗುವ ಸಾಧ್ಯತೆ ಇದೆ.

ಸೆಪ್ಟೆಂಬರ್ 18ರಂದು ಹೆಚ್ಚುವರಿ ಬೆಲೆ ಕಡಿತ ಘೋಷಣೆಯ ನಂತರ, 75,000 ಬುಕ್ಕಿಂಗ್‌ಗಳು ಸ್ವೀಕರಿಸಲ್ಪಟ್ಟಿವೆ. ಪ್ರತಿ ದಿನ ಸರಾಸರಿ 15,000 ಬುಕ್ಕಿಂಗ್‌ಗಳು ಬರುತ್ತಿವೆ. ಇದು ಸಾಮಾನ್ಯಕ್ಕಿಂತ 50% ಹೆಚ್ಚು ಎಂದು ಬ್ಯಾನರ್ಜಿ ತಿಳಿಸಿದ್ದಾರೆ. ಸಣ್ಣ ಕಾರುಗಳಿಗೆ ಬೇಡಿಕೆ ವಿಶೇಷವಾಗಿ ಪ್ರಬಲವಾಗಿದೆ.

ಬಳಸಿದ ಕಾರು ವ್ಯವಹಾರದಲ್ಲಿಯೂ ಉತ್ಸಾಹ ಕಂಡುಬಂದಿದೆ. ನವರಾತ್ರಿಯ ಮೊದಲ ದಿನದ ಮಧ್ಯಾಹ್ನದವರೆಗೆ ಕಾರು ವಿತರಣೆಯಲ್ಲಿ ಶೇ. 400ರಷ್ಟು ದಾಖಲೆ ಏರಿಕೆ ಕಂಡುಬಂದಿದೆ. ಹೆಚ್ಚುವರಿ ಮಾರಾಟ ದೆಹಲಿ-NCR ಪ್ರದೇಶದಲ್ಲಿ ಗಮನಾರ್ಹವಾಗಿದೆ. ನಂತರ ಅಹಮದಾಬಾದ್, ಬೆಂಗಳೂರು, ಪುಣೆ ಮತ್ತು ಮುಂಬೈ ಪ್ರದೇಶಗಳು ಸೇರಿವೆ. ಸದ್ಯ GST ಕಡಿತ, ಹಬ್ಬದ ಸೀಸನ್ ಇಂದಾಗಿ ಜನರು ಕಾರ್ ಖರೀದಿಗೆ ಮುಂದಾಗಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author