400 ವರ್ಷಗಳ ಇತಿಹಾಸ ಹೊಂದಿರುವ ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭಿಮನ್ಯು ಮೇಲಿರುವ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ. ನಾಳೆ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ನೆರವೇರುವುದರೊಂದಿಗೆ ದಸರಾ ದಿನದ ಜಂಬೂ ಸವಾರಿಗೆ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದು ಗನ್ ಶಾಟ್, ಗೌರವ ವಂದನೆ, ಆನೆ, ಬ್ಯಾಂಡ್ ಹಾಗೂ ಕುದುರೆಗಳೊಂದಿಗೆ ಕೊನೆಯ ತಾಲೀಮು ನಡೆಯಿತು.
ಭದ್ರತಾ ವ್ಯವಸ್ಥೆಯ ಭಾಗವಾಗಿ ನಾಳೆಯಿಂದಲೇ ಪೊಲೀಸ್ ಬಂದೋಬಸ್ತ್ ಜಾರಿಯಲ್ಲಿರಲಿದೆ. ಭದ್ರತೆಯನ್ನು ಎರಡು ಹಂತಗಳಲ್ಲಿ ಏರ್ಪಡಿಸಲಾಗಿದ್ದು, ಎರಡನೇ ಹಂತದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಜಂಬೂ ಸವಾರಿ ಮತ್ತು ಬನ್ನಿಮಂಟಪ ಕಾರ್ಯಕ್ರಮಗಳಿಗೆ ಪ್ರವೇಶಕ್ಕೆ ಪಾಸ್ ಕಡ್ಡಾಯವಾಗಿದೆ. ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ ಮತ್ತು ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತದೆ. ಅಂಬಾರಿ ಸಾಗುವ ಮಾರ್ಗದಲ್ಲಿನ ಕಟ್ಟಡಗಳು ಅಥವಾ ಮರಗಳ ಮೇಲೆ ಹತ್ತುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಈ ಬಾರಿ ವಿಶೇಷವೆಂದರೆ, ಎಲ್ಲಾ 14 ಆನೆಗಳೂ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿವೆ. ಪಟ್ಟದ ಆನೆಯಾಗಿ ಶ್ರೀಕಂಠವನ್ನು ಆಯ್ಕೆ ಮಾಡಲಾಗಿದೆ. ದಸರಾ ಉತ್ಸವಕ್ಕಾಗಿ ಮೈಸೂರಿಗೆ ತೆರಳುವವರ ಸಂಚಾರ ಹೆಚ್ಚುತ್ತಿರುವುದರಿಂದ, ಬೆಂಗಳೂರು–ಮೈಸೂರು ಮಾರ್ಗದಲ್ಲಿ 200 ಕ್ಕೂ ಹೆಚ್ಚು ಬಸ್‌ಗಳನ್ನು ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿದೆ. ಆದರೆ, ಈ ವಿಶೇಷ ಬಸ್‌ಗಳ ಟಿಕೆಟ್ ದರವನ್ನು ಶೇಕಡಾ 5 ರಷ್ಟು ಹೆಚ್ಚಿಸಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




