Monday, August 4, 2025

Latest Posts

ಕೊನೆಗೂ BBMPಗೆ ಚುನಾವಣೆ ಫಿಕ್ಸ್‌ : ಸುಪ್ರೀಂಗೆ ಪ್ರಮಾಣ ಪತ್ರ

- Advertisement -

ಕೊನೆಗೂ BBMPಗೆ ಚುನಾವಣೆ ಫಿಕ್ಸ್‌! ಸುಪ್ರೀಂಕೋರ್ಟ್‌ಗೆ ಸರ್ಕಾರದಿಂದ ಪ್ರಮಾಣ ಪತ್ರ

ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ ನಗರ ಪಾಲಿಕೆಗಳನ್ನು ರಚಿಸಿ ರಾಜ್ಯ ಸರ್ಕಾರ ಗಡಿಯನ್ನು ಗುರುತಿಸಿದೆ. ಬಿಬಿಎಂಪಿಗೆ ಸರ್ಕಾರ ಇದೇ ಡಿಸೆಂಬರ್‌ ನಲ್ಲಿ ಚುನಾವಣೆ ನಡೆಸಲು ಸಿದ್ದವಿರುವುದಾಗಿ ಸುಪ್ರೀಂಕೋರ್ಟ್‌ ಗೆ ಪ್ರಮಾಣಪತ್ರ ಸಲ್ಲಿಸಿದೆ. ನಗರಾಭಿವೃದ್ದಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಪರವಾಗಿ ವಕೀಲ ಡಿ.ಎಲ್.ಚಿದಾನಂದ ಅವರು ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಿದ್ದಾರೆ.

BBMP ಚುನಾವಣೆಗೆ ಸಂಬಂಧಿಸಿದಂತೆ ಅರ್ಜಿಯ ವಿಚಾರಣೆಯನ್ನು ಸುಪ್ರೀಂನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಹಾಗೂ ಜೋಯ್‌ ಮಾಲ್ಯ ಬಾಗ್ಚಿ ಅವರಿರುವ ಪೀಠ ನಡೆಸಲಿದೆ. ಈ ಸಂಬಂಧ ಮಾಜಿ ಸದಸ್ಯ ಶಿವರಾಜ್‌ ಮತ್ತು ಇತರರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಾದ ಮಂಡಿಸಿದ ಮುಕುಲ್ ರೋಹಟಗಿ, ಬಿಬಿಎಂಪಿಗೆ ಚುನಾವಣೆ ನಡೆಯದೆ ಐದು ವರ್ಷ ಕಳೆದಿದೆ. 2015ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದಿತ್ತು. ನಾನಾ ಕಾರಣ ನೀಡಿ ಚುನಾವಣೆಯನ್ನು ಮುಂದಕ್ಕೆ ಹಾಕಲಾಗುತ್ತಿದೆ ಎಂದು ವಾದಿಸಿದರು.
ಸರ್ಕಾರದ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಚುನಾವಣೆ ತಡವಾಗಿದೆ, ಇದರಲ್ಲಿ ಎರಡು ಮಾತಿಲ್ಲ. ಆದರೆ, ಬಿಬಿಎಂಪಿಯನ್ನು ವಿಂಗಡಣೆ ಮಾಡಲಾಗಿದೆ. ಬಿಬಿಎಂಪಿಯನ್ನು ಐದು ಪಾಲಿಕೆಗಳನ್ನಾಗಿ ವಿಭಜಿಸಿ ಜುಲೈ 19ರಂದು ಅಧಿಸೂಚನೆ ಹೊರಡಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಆಗಸ್ಟ್ 18ರವರೆಗೆ ಅವಕಾಶವಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲು ರಾಜ್ಯ ಸರ್ಕಾರಕ್ಕೆ 15 ದಿನಗಳ ಕಾಲಾವಕಾಶ ಬೇಕು. ಐದು ಪಾಲಿಕೆಗಳಿಗೆ ಹೊಸ ವಾರ್ಡ್‌ಗಳ ರಚನೆ ಮಾಡಬೇಕಿದೆ. ವಾರ್ಡ್‌ಗಳ ಗಡಿಯ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸ್ವೀಕರಿಸಬೇಕಿದೆ. ನಂತರ ಅಂತಿಮ ಅಧಿಸೂಚನೆ ಹೊರಡಿಸಬೇಕು. ನವೆಂಬರ್ 1ರ ಹೊತ್ತಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈತನಕ ಆಗಿರುವ ಬೆಳವಣಿಗೆಗಳ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸಲು ರಾಜ್ಯಕ್ಕೆ ಸೂಚನೆ ನೀಡಿತು. ಬಳಿಕ, ಮುಂದಿನ ಸೋಮವಾರಕ್ಕೆ ವಿಚಾರಣೆ ಮುಂದೂಡಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss