ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವಂತೆ, ಹಲವರು ಬಂಗಾರವನ್ನು ಭದ್ರ ಹೂಡಿಕೆಯಾಗಿ ಪರಿಗಣಿಸಿ ಸಂಗ್ರಹಿಸುತ್ತಿದ್ದಾರೆ. ಆದರೆ, ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಎಂಬುದು ಬಹುಮಾನ್ಯ ಪ್ರಶ್ನೆಯಾಗಿದೆ. ಮಿತಿ ಮೀರಿದರೆ ಅಧಿಕಾರಿಗಳ ದಾಳಿ, ದಂಡ ಅಥವಾ ವಶಪಡಿಸಿಕೊಳ್ಳುತ್ತಾರೆ ಎಂಬ ಭಯ ಕೂಡ ಜನರಲ್ಲಿದೆ. ಆದರೆ, ಏನೆಲ್ಲಾ ಕಾನೂನು ಕಟ್ಟುಪಾಡುಗಳು ಇದೆಯೆಂದು ನಿಖರವಾಗಿ ತಿಳಿದರೆ, ಬಂಗಾರವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.
ಒಬ್ಬ ವ್ಯಕ್ತಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?
ಆದಾಯ ತೆರಿಗೆ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ, ವ್ಯಕ್ತಿಯೊಬ್ಬನು ಇಟ್ಟುಕೊಳ್ಳಬಹುದಾದ ಚಿನ್ನದ ಪ್ರಮಾಣವಿಲ್ಲ ಎಂಬುದಾಗಿ ನಿಖರ ಕಾನೂನು ಇಲ್ಲ. ಆದರೆ, ಆದಾಯ ತೆರಿಗೆ ದಾಳಿಗಳ ಸಮಯದಲ್ಲಿ ಅನುಸರಿಸಬಹುದಾದ ಮಾರ್ಗದರ್ಶಿ ಮಿತಿಗಳು ಇವೆ. ಅವಿವಾಹಿತ ಪುರುಷರು 100 ಗ್ರಾಂ ವರೆಗೆ, ಅವಿವಾಹಿತ ಮಹಿಳೆಯರು 250 ಗ್ರಾಂ ವರೆಗೆ, ವಿವಾಹಿತ ಮಹಿಳೆಯರು 500 ಗ್ರಾಂ ವರೆಗೆ ಇಟ್ಟುಕೊಳ್ಳಬಹುದು.
ಗಮನಿಸಬೇಕಾದ ಅಂಶ ಅಂದ್ರೆ ಈ ಮಿತಿಗಳು ಆದಾಯ ತೆರಿಗೆ ಅಧಿಕಾರಿಗಳ ದಾಳಿ ಸಮಯದಲ್ಲಿ ಕಾನೂನುಬದ್ಧ ಮತ್ತು ಕಾನೂನುಬಾಹಿರ ಚಿನ್ನದ ಸಂಗ್ರಹಣೆಯನ್ನು ಪ್ರತ್ಯೇಕಿಸಲು ಸಹಾಯ ಮಾಡುವ ಮಾರ್ಗಸೂಚಿಗಳಾಗಿವೆ. ಒಂದು ವೇಳೆ ಮೇಲೆ ನಿರ್ದಿಷ್ಟಪಡಿಸಿದ ಮಿತಿಗಳಿಗಿಂತ ಹೆಚ್ಚು ಚಿನ್ನ ಹೊಂದಿದ್ದರೆ, ಆದಾಯ ತೆರಿಗೆ ಅಧಿಕಾರಿಗಳು ದಾಖಲಾತಿ ಮತ್ತು ಆದಾಯದ ಪುರಾವೆಯನ್ನು ಪರಿಶೀಲಿಸಲು ಒತ್ತಾಯಿಸಬಹುದು.
ಮನೆಯಲ್ಲಿ ಹೆಚ್ಚು ಚಿನ್ನ ಸಂಗ್ರಹಿಸಿದರೆ ದಂಡ ಪಾವತಿಸಬೇಕೇ?
ಹೌದು. ಮನೆಯಲ್ಲಿ ಸಂಗ್ರಹಿಸಿದ ಚಿನ್ನವು ನಿಗದಿತ ಮಿತಿಗಿಂತ ಹೆಚ್ಚು ಚಿನ್ನವಿದ್ದರೆ, ಅದನ್ನು ಘೋಷಿಸದ ಆದಾಯ ಎಂದು ಪರಿಗಣಿಸಬಹುದು ಮತ್ತು ತೆರಿಗೆ ದಂಡಕ್ಕೆ ಒಳಪಡಿಸಬಹುದು. ಅಂತಹ ಚಿನ್ನವನ್ನು ಆದಾಯ ತೆರಿಗೆ ದಾಳಿ ಅಥವಾ ತನಿಖೆಯ ಸಮಯದಲ್ಲಿ ವಶಪಡಿಸಿಕೊಳ್ಳುವ ಸಾಧ್ಯತೆಯೂ ಇದೆ.
ಹಾಗಾದ್ರೆ ಮನೆಯಲ್ಲಿ ಇಟ್ಟ ಚಿನ್ನಕ್ಕೆ ತೆರಿಗೆ ಪಾವತಿಸಬೇಕಾ?
ಇಲ್ಲ. ಭಾರತದಲ್ಲಿ ಮನೆಯಲ್ಲಿ ನಿಗದಿತ ಮಿತಿಗಳಲ್ಲಿ ಚಿನ್ನ ಇಟ್ಟುಕೊಳ್ಳಲು ಯಾವುದೇ ತೆರಿಗೆ ಇಲ್ಲ. ತೆರಿಗೆಯು ಖರೀದಿಯ ಸಮಯದಲ್ಲಿ ಶೇ. 3 GST ಅಥವಾ ಮಾರಾಟದ ಸಮಯದಲ್ಲಿ ಬಂಡವಾಳ ಲಾಭ ತೆರಿಗೆ ಮಾತ್ರ ಅನ್ವಯಿಸುತ್ತದೆ. ಆದರೆ, ಮನೆಯಲ್ಲಿ ಮಿತಿ ಮೀರಿದ ಚಿನ್ನಕ್ಕೆ ನೀವು ಸರಿಯಾದ ದಾಖಲಾತಿಗಳನ್ನು ಒದಗಿಸಲು ಸಾಧ್ಯವಾಗದಿದ್ದರೆ, ದಂಡಗಳು ಅನ್ವಯಿಸಬಹುದು.
ವರದಿ : ಲಾವಣ್ಯ ಅನಿಗೋಳ