ರಣರಂಗವಾಗಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ನಡೆದ ಮತದಾನದಲ್ಲಿ ಶೇಕಡಾ 50ಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನ ದಿನಕ್ಕಾಗಿ ರಾಜ್ಯಾದ್ಯಂತ ಭದ್ರತೆ ಹೆಚ್ಚಿಸಲಾಗಿತ್ತು.
ಮೊದಲ ಹಂತದಲ್ಲಿ 1,314 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದು, ಇವರ ಭವಿಷ್ಯ ನವೆಂಬರ್ 14ರಂದು ಹೊರ ಬೀಳಲಿದೆ. ಇನ್ನು ನವೆಂಬರ್ 11ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಈ ವೇಳೆ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರ ಕಾರಿನ ಮೇಲೆ ಚಪ್ಪಲಿ ಮತ್ತು ಕಲ್ಲು ಎಸೆದ ಘಟನೆ ನಡೆದಿದೆ. ಇವರು ಆರ್‌ಜೆಡಿ ನಾಯಕರಲ್ಲ ಗೂಂಡಾಗಳು. ಎನ್ಡಿಎ ಅಧಿಕಾರಕ್ಕೆ ಬಂದ ನಂತರ ಆರ್‌ಜೆಡಿ ಗೂಂಡಾಗಳ ಎದೆ ಮೇಲೆ ಬುಲ್ಡೋಜರ್ ಹತ್ತಿಸ್ತೇವೆ ಎಂದು ವಿಜಯ್ ಕುಮಾರ್ ಸಿನ್ಹಾ ಕಿಡಿಕಾರಿದ್ದಾರೆ.
ಚುನಾವಣಾ ಕಣದಲ್ಲಿದ್ದಾರೆ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್. ತೇಜಸ್ವಿ ಯಾದವ್ ಬಿಜೆಪಿಯ ಸತೀಶ್ ಕುಮಾರ್ ವಿರುದ್ಧ ಸ್ಪರ್ಧಿಸುತ್ತಿದ್ದು, ತೇಜ್ ಪ್ರತಾಪ್ ತಮ್ಮ ಹೊಸ ಪಕ್ಷ ಜನಶಕ್ತಿ ಜನತಾ ದಳದಿಂದ ರಣರಂಗಕ್ಕಿಳಿದಿದ್ದಾರೆ. ಈ ಚುನಾವಣೆಯಲ್ಲಿ ಶೇಕಡಾ 36ರಷ್ಟು ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

