ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಹಾಗೂ ಖಳ ನಟ, ಫಿಶ್ ವೆಂಕಟ್ ನಿಧನರಾಗಿದ್ದಾರೆ. ಫಿಶ್ ವೆಂಕಟ್ ಅವರು ದೀರ್ಘ ಕಾಲದಿಂದ ಕಾಯಿಲೆಗೆ ತುತ್ತಾಗಿದ್ದರು. ತಮ್ಮ 54ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ಆರ್ಥಿಕ ನೆರವು ನೀಡಿದ್ದರೂ ಅದು ವ್ಯರ್ಥವಾಗಿದೆ.
ಫಿಶ್ ವೆಂಕಟ್, ಮೂಲ ಹೆಸರು ಮಂಗಳಂಪಲ್ಲಿ ವೆಂಕಟೇಶ್. ಮುಶೀರಾಬಾದ್ ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುವ ಮೂಲಕ ಜನರಿಗೆ ಪರಿಚಿತರಾದರು. ಈ ಹಿನ್ನೆಲೆಯಿಂದಲೇ ‘ಫಿಶ್ ವೆಂಕಟ್’ ಎಂಬ ಹೆಸರಿನಲ್ಲಿ ಅವರು ಜನಪ್ರಿಯರಾದರು. ಅವರ ಸುದೀರ್ಘ ಚಲನಚಿತ್ರ ಜೀವನದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪಾತ್ರವಹಿಸಿ, ಅನೇಕರು ಮೆಚ್ಚಿದ ನಟನಾಗಿ ಹೊರಹೊಮ್ಮಿದ್ದರು.
ಚಿತ್ರರಂಗಕ್ಕೆ ಪ್ರವೇಶ ಪಡೆದದ್ದು ನಟ ಶ್ರೀಹರಿ ಮೂಲಕ. ನಂತರ, ಫಿಶ್ ವೆಂಕಟ್ ಅವರು ಆದಿ, ದಿಲ್, ಬನ್ನಿ, ಡಿಜೆ ಟಿಲ್ಲು ಮೊದಲಾದ ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ತಮ್ಮದೇ ಆದ ಹಾಸ್ಯಶೈಲಿಯಿಂದ ಪ್ರೇಕ್ಷಕರ ಮನಗೆದ್ದಿದ್ದರು.
ಆದರೆ, ಫಿಲ್ಮ್ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದರೂ ಆರ್ಥಿಕವಾಗಿ ಸ್ಥಿರತೆ ಕಾಣಲಿಲ್ಲ. ಕಳೆದ ಕೆಲ ತಿಂಗಳುಗಳಿಂದ ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ವೆಂಕಟ್ ಬಳಲುತ್ತಿದ್ದರು. ಕಳೆದ ವಾರ ಬೋಡುಪ್ಪಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಎರಡೂ ಕಿಡ್ನಿಗಳು ಸಂಪೂರ್ಣ ಹಾನಿಗೊಂಡಿದ್ದರಿಂದ ಕಸಿ ಮಾಡಬೇಕಾಗಿತ್ತು.
ವೈದ್ಯಕೀಯ ವೆಚ್ಚಗಳನ್ನು ಭರಿಸಲು ಕುಟುಂಬವು ಹರಸಾಹಸ ಪಡುತ್ತಿತ್ತು. ಈ ಸಂದರ್ಭದಲ್ಲಿ, ಪವನ್ ಕಲ್ಯಾಣ್ ಅವರು ಸಹೃದಯತೆಯಿಂದ ಎರಡು ಲಕ್ಷ ರೂಪಾಯಿ ನೆರವಿನ ಹಸ್ತ ನೀಡಿದರು. ಆದರೆ, ಅದು ಸಾಕಾಗಲಿಲ್ಲ. ಚಿಕಿತ್ಸೆಗೆ ಬೇಕಾದ ಸಂಪೂರ್ಣ ಹಣ ಲಭ್ಯವಾಗದೆ, ಸೂಕ್ತ ಚಿಕಿತ್ಸೆ ಸಿಗದೆ, ಜುಲೈ 18ರಂದು ವೆಂಕಟ್ ಅವರು ನಮ್ಮನ್ನೆಲ್ಲಾ ಅಗಲಿದರು.
ಫಿಶ್ ವೆಂಕಟ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದರು. ಸಹನಟರು, ನಿರ್ದೇಶಕರು, ಅಭಿಮಾನಿಗಳು ಅವರ ಅಗಲಿಕೆಗೆ ದುಃಖ ವ್ಯಕ್ತಪಡಿಸಿದ್ದಾರೆ.