ಪಶ್ಚಿಮಘಟ್ಟದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಗೊರೂರು ಬಳಿಯ ಹೇಮಾವತಿ ಜಲಾಶಯಕ್ಕೆ ಹೆಚ್ಚು ನೀರು ಹರಿದುಬರುತ್ತಿದೆ. ನದಿಗೆ ನೀರು ಹರಿದುಬಿಟ್ಟಿರುವುದರಿಂದ ತಾಲ್ಲೂಕಿನ ಹೇಮಗಿರಿ ಬಳಿ ಹೇಮಾವತಿ ನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗೊರೂರು ಜಲಾಶಯದಿಂದ 17 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಯ ಬಿಡಲಾಗಿರುವುದರಿಂದ ಹೇಮಾವತಿ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು ನದಿಪಾತ್ರದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದು ನದಿಪಾತ್ರದ ಹಳ್ಳಿಗಳ ಜನ ತುಂಬಿ ಹರಿದು ಬರುತ್ತಿರುವ ಹೇಮಾವತಿ ನದಿಗೆ ಬಾಗಿನ ನೀಡಿ ಸ್ವಾಗತಿಸಿದ್ದಾರೆ.
ಕೆ ಆರ್ ಪೇಟೆ ತಾಲ್ಲೂಕಿನ ಕಡೆಹೆಮ್ಮಿಗೆ- ಗೂಡೆಹೊಸೂರು ಬಳಿ ತಾಲ್ಲೂಕನ್ನು ಪ್ರವೇಶಿಸುವ ಹೇಮಾವತಿ ನದಿ ಹಲವು ಗ್ರಾಮಗಳನ್ನು ಹಾದು ಹೋಗುತ್ತಿದ್ದು ಹಲವು ಪುಣ್ಯತಾಣಗಳ ಸೃಷ್ಟಿಗೆ ಕಾರಣವಾಗಿದೆ. ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಬೃಗು ಮಹರ್ಷಿಗಳ ತಪೋ ಭೂಮಿಯಾಗಿರುವ ಹೇಮಗಿರಿ ಬಳಿ ನದಿಯು ಪಶ್ಚಿಮಾಭಿಮುಖವಾಗಿ ಹರಿಯುವುದರ ಜತೆಗೆ ಬೆಟ್ಟದ ಮೇಲಿನ ಕಲ್ಯಾಣ ವೆಂಕಟರಮಣನಿಗೆ ನಮಿಸಿ ಸಾಗುತ್ತದೆ. ಕಡೆಹೆಮ್ಮಿಗೆ, ಮಾದಾಪುರ, ಮಂದಗೆರೆ, ಹೇಮಗಿರಿ, ಅಕ್ಕಿಹೆಬ್ಬಾಳು, ಹರಿಹರಪುರ, ಮಡುವಿನಕೋಡಿ, ಬಂಡಿಹೊಳೆ ಕಟ್ಟಹಳ್ಳಿ, ಭೂವರಾಹನಾಥ ಕಲ್ಲಹಳ್ಳಿ, ಬೆಳ್ಳೂರು ಮಾರ್ಗವಾಗಿ ನದಿಯು ಅಂಬಿಗರಹಳ್ಳಿ ಸಂಗಾಪುರದ ತ್ರಿವೇಣಿಸಂಗಮದ ಬಳಿ ಕಾವೇರಿ ನದಿಯನ್ನು ಸಂಗಮಿಸಿ ನಂತರ ಕನ್ನಂಬಾಡಿಕಟ್ಟೆ ಸೇರುತ್ತದೆ.
ಇನ್ನು ಹೇಮಗಿರಿ ಬಳಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಿದ್ದ ಹೇಮಾವತಿ ನದಿಯ ಅಣೆ ಮೇಲೆ ನದಿಯ ನೀರು ರಭಸವಾಗಿ ಹರಿಯುತ್ತಿರುವುದರಿಂದ ಹೇಮಗಿರಿ ಫಾಲ್ಸ್ ನಿರ್ಮಾಣವಾಗಿದೆ. ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಹೇಮಗಿರಿ ಫಾಲ್ಸ್ ನ್ನು ಕಣ್ಣುಂಬಿಸಿಕೊಂಡು ಫಾಲ್ಸ್ ಬಳಿ ಪೋಟೊ ತೆಗೆಸಿಕೊಳ್ಳುವದು ಸಾಮಾನ್ಯವಾಗಿದೆ. ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ನದಿಪಾತ್ರದ ಹಳ್ಳಿಗಳ ಜನರು ನದಿಗೆ ಇಳಿಯದಂತೆ ದನಕರುಗಳನ್ನು ಮೇಯಲು ಬಿಡದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ ಹಾಗೂ ಹೇಮಗಿರಿ ಅಣೆಯ ಬಳಿ ಹೋಗದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ