ಜಾನಪದ ಕಲಾವಿದ ‘ಮೈಲಾರಿ’ ಬಂಧನ!

ಆರ್ಕೆಸ್ಟ್ರಾದಲ್ಲಿ ನೃತ್ಯ ಮಾಡಲು ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಜಾನಪದ ಕಲಾವಿದ ಮೈಲಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರಕ್ಕೆ ತೆರಳಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಮೈಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆ ಕುಡಗುಂಟಿ ಗ್ರಾಮದ 29 ವಯಸ್ಸಿನ ಮೈಲಾರಪ್ಪ ಮಡಿವಾಳರ ಉರುಫ್ ಮ್ಯೂಸಿಕ್ ಮೈಲಾರಿಯನ್ನು ವಿಜಯಪುರ ಜಿಲ್ಲೆ ತಿಕೋಟದಲ್ಲಿ ತೇರದಾಳ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಮೈಲಾರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇನ್ನು ಜೈಲಿಗೆ ಕಳುಹಿಸುವ ಮುನ್ನ ಮೈಲಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಈ ಪ್ರಕರಣದ ಹಿಂದೆ ಷಡ್ಯಂತ್ರವಿದ್ದು, ತಮ್ಮ ಏಳಿಗೆಯನ್ನು ಸಹಿಸದ ಕೆಲವರು ತಮ್ಮ ವಿರುದ್ಧ ಆರೋಪ ಹೊರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

“ಮ್ಯೂಸಿಕ್ ಮೈಲಾರಿ, ಟ್ರೆಂಡಿಂಗ್ ಸ್ಟಾರ್ ಆಗಲು ನಾನು ಬಹಳ ಕಷ್ಟಪಟ್ಟಿದ್ದೇನೆ. ಬಡತನದಿಂದ ಹೊರಬಂದು ಅನೇಕ ಹೋರಾಟಗಳ ಮೂಲಕ ಇಲ್ಲಿಗೆ ಬಂದಿದ್ದೇನೆ. ನನ್ನ ಮೇಲೆ ಈ ಹಿಂದೆ ಕೂಡ ಹಲವು ಬಾರಿ ಆರೋಪ ಹೊರಿಸುವ ಪ್ರಯತ್ನಗಳು ನಡೆದಿವೆ. ಆದರೆ ಕಾನೂನು ಇದೆ, ಸಂವಿಧಾನ ಇದೆ. ನಾನು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ. ನನಗೆ ಯಾವುದೇ ರೀತಿಯ ತಪ್ಪಿಲ್ಲ. ನ್ಯಾಯಾಲಯದಲ್ಲಿ ನಾನು ನಿರ್ದೋಷಿ ಎಂದು ಸಾಬೀತು ಮಾಡುತ್ತೇನೆ” ಎಂದು ಮೈಲಾರಿ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಹಲವರ ಕೈವಾಡವಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ತಮ್ಮ ಏಳಿಗೆಯನ್ನು ಸಹಿಸದವರಿಂದಲೇ ಈ ಆರೋಪಗಳು ಬಂದಿವೆ ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ, ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಸಂಬಂಧಿತ ಎಲ್ಲಾ ಆಯಾಮಗಳಿಂದ ವಿಚಾರಣೆ ಮುಂದುವರಿದಿದೆ.

ವರದಿ : ಲಾವಣ್ಯ ಅನಿಗೋಳ

About The Author