ಹಾಸನದಲ್ಲಿ ಕಟ್ಟೆಚ್ಚರ ಖಾಕಿ ಪಡೆ ಹದ್ದಿನ ಕಣ್ಣು

ದೆಹಲಿಯ ಕೆಂಪು ಕೋಟೆ ಬಳಿ ಕಾರು ಬಾಂಬ್‌ ಸ್ಫೋಟ ಪ್ರಕರಣದ ಬಳಿಕ, ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಹಾಸನ ಜಿಲ್ಲೆಯಾದ್ಯಂತ ಖಾಕಿ ಪಡೆ ಹದ್ದಿನ ಕಣ್ಣಿಟ್ಟು, ತಪಾಸಣಾ ಕಾರ್ಯ ಮುಂದುವರೆಸಿದೆ.

ನಗರದ ರೈಲ್ವೇ ನಿಲ್ದಾಣದ ಕಾರ್‌-ಬೈಕ್‌ ಪಾರ್ಕಿಂಗ್‌ನಲ್ಲಿ, ರೈಲ್ವೇ ಪೊಲೀಸರು ತಪಾಸಣೆ ನಡೆಸಿದ್ದಾರೆ. ಮೆಟಲ್‌ ಡಿಟೆಕ್ಟರ್‌ ಹಿಡಿದು ಪರಿಶೀಲನೆ ನಡೆಸಿದ್ರು. ರೈಲ್ವೇ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಬ್ಯಾಗ್‌ ಮತ್ತು ನಿಲ್ದಾಣ ವ್ಯಾಪ್ತಿಯಲ್ಲಿರುವ ಕಸದ ತೊಟ್ಟಿ, ಆಗಮನ-ನಿರ್ಗಮದ ದ್ವಾರ, ನಿಲುಗಡೆ ಪ್ರದೇಶಗಳಲ್ಲಿ ತೀವ್ರ ತಪಾಸಣೆ ಮಾಡಲಾಗಿದೆ.

ಮತ್ತೊಂದೆಡೆ, ಚನ್ನಪಟ್ಟಣ ಬಸ್‌ ನಿಲ್ದಾಣ, ಹಳೆ ಬಸ್‌ ನಿಲ್ದಾಣ ಮತ್ತು ಜನಸಂದಣಿ ಸೇರುವ ಪ್ರದೇಶಗಳಲ್ಲಿ, ಶ್ವಾನದಳ, ಬಾಂಬ್‌ ಸ್ವಾಡ್‌ಗಳು ತಪಾಸಣೆ ನಡೆಸಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೂಚನೆ ಹಿನ್ನೆಲೆ ಹೈಅಲರ್ಟ್‌ ಘೋಷಿಸಲಾಗಿದೆ. ಇನ್ನು ಬೇಲೂರಿನ ಪುರಾಣ ಪ್ರಸಿದ್ಧ ಚನ್ನಕೇಶವ ದೇವಾಲಯ, ಗೊರರು ಹೇಮಾವತಿ ಜಲಾಶಯ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಮುಖ್ಯವಾಗಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ, ಹಾಸನ ಜಿಲ್ಲಾ ಪೊಲೀಸರು ಸೂಚಿಸಿದ್ದಾರೆ. ಅನುಮಾನಾಸ್ಪದ ಬ್ಯಾಗ್‌, ಪ್ಯಾಕೆಟ್‌, ವಸ್ತುಗಳು ಕಂಡುಬಂದಲ್ಲಿ ತಕ್ಷಣವೇ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

About The Author