ಜಾತಿಗಣತಿ ಬೆನ್ನಲ್ಲೇ ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಕಹಳೆ ಮೊಳಗಿದೆ. ಸಿದ್ದರಾಮಯ್ಯ ಸಂಪುಟದ ಪ್ರಮುಖ ಇಬ್ಬರು ಸಚಿವರಲ್ಲೇ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಎಂ.ಬಿ. ಪಾಟೀಲ್ ಆಗ್ರಹಿಸಿದ್ರೆ, ವೀರಶೈವ ಲಿಂಗಾಯತ ಎರಡೂ ಒಂದೇ ಅಂತಾ ಈಶ್ವರ್ ಖಂಡ್ರೆ ವಾದಿಸುತ್ತಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವೀರಶೈವ-ಲಿಂಗಾಯತ ವಿಭಜನೆಗೆ ಯತ್ನಿಸಿದ್ರು. ಇದೀಗ ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಹೆಚ್ಚಿದೆ. ಅಕ್ಟೋಬರ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ, ಬಸವ ಸಾಂಸ್ಕೃತಿಕ ಅಭಿಯಾನ ನಡೆಸಲಾಗಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ರು. ಆದ್ರೆ, ಲಿಂಗಾಯತ ಮಠಾಧೀಶರ ನಡೆಗೆ ಮಹಾಸಭಾ ಬೇಸರಗೊಂಡಿದ್ದು, ಹೋರಾಟದಿಂದ ಈಶ್ವರ್ ಖಂಡ್ರೆ ಅಂತರ ಕಾಯ್ದುಕೊಂಡಿದ್ದಾರೆ.
ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಎಂ.ಬಿ. ಪಾಟೀಲ್, ನಾವೆಲ್ಲಾ ಭೌಗೋಳಿಕವಾಗಿ ಹಿಂದೂಗಳು. ಸಿಖ್, ಬೌದ್ಧ, ಜೈನ ರೀತಿಯಲ್ಲೇ ಬಸವ ಧರ್ಮ ಇದೆ. ಇದರಲ್ಲಿ ಪ್ರಶ್ನೆ ಏನಿದೆ. ಕಳೆದ ಬಾರಿ ಮಾಡಿದ್ರು. ಈ ಬಾರಿ ಜನ ಜಾಗೃತರಾಗಿದ್ದಾರೆ. ಮುಖ್ಯಮಂತ್ರಿಗಳ ತಲೆಗೆ ಕಟ್ಟೋದಕ್ಕೆ ಆಗಲ್ಲ. ಈ ಬಾರಿ ಯಾರ ಆಟವೂ ನಡೆಯಲ್ಲ ಅಂತಾ ಹೇಳಿದ್ದಾರೆ.
ಸಚಿವ ಈಶ್ವರ್ ಖಂಡ್ರೆ ಮಾತನಾಡಿದ್ದು, ವೀರಶೈವ-ಲಿಂಗಾಯತ ಎರಡು ಸಮಾನಾರ್ಥಕ ಪದಗಳು. ಇವೆರಡು ಭಿನ್ನ ಅಲ್ಲ. ಎಲ್ಲರು ಒಗ್ಗಟ್ಟಾಗಿ, ಸಂಘಟಿತರಾಗಿ ಇರಬೇಕು. ಸಂಘಟನೆಯಲ್ಲಿ ಶಕ್ತಿ ಇದೆ. ವಿಘಟನೆಯಲ್ಲಿ ಯಾವುದೇ ಉಪಯೋಗ ಆಗೋದಿಲ್ಲ ಅಂತಾ ಟಾಂಗ್ ಕೊಟ್ಟಿದ್ಧಾರೆ.