ಧರ್ಮಸ್ಥಳ ನಿಗೂಢ ಸಾವುಗಳ ಪ್ರಕರಣದ SIT ತನಿಖೆ ನಡೀತಿದೆ. ಮತ್ತೊಂದೆಡೆ ಸೌಜನ್ಯ ಸಾವಿಗೆ ನ್ಯಾಯ ಸಿಗುವಂತೆ ಆಗ್ರಹಿಸಿ, ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಪ್ರತಿಭಟನೆಯ ಹಾದಿ ಹಿಡಿದಿದೆ. ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ನೇತೃತ್ವದಲ್ಲಿ, ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನೂರಾರು ಜನರು ಪ್ರತಿಭಟನೆಗಿಳಿದಿದ್ದಾರೆ.
ಪ್ರತಿಭಟನಾಕಾರರು ಧರ್ಮಸ್ಥಳದ ನೂರಾರು ಅಸಹಜ ಸಾವುಗಳ ಬಗ್ಗೆ ತನಿಖೆಯಾಗಲಿ. ಗ್ರಾಮಾಭಿವೃದ್ಧಿ ಹೆಸರಿನ ಮೈಕ್ರೋ ಫೈನಾನ್ಸ್ ನಿಲ್ಲಿಸಿ. ಬಡ್ಡಿ, ಸಾಲ ಮನ್ನಾ ಮಾಡಿ. ಧರ್ಮಸ್ಥಳದ ನೂರಾರು ಅಸಹಜ ಸಾವುಗಳ ಪ್ರಕರಣದಲ್ಲಿ ಪ್ರಭಾವಿಗಳು ಇಲ್ಲವೆಂದರೆ, ಹೋರಾಟಗಾರರನ್ನು ಟಾರ್ಗೆಟ್ ಮಾಡುತ್ತಿರುವುದು ಯಾರು?. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸಲ್ಲ ಅಂತಾ ಆಗ್ರಹಿಸಿದ್ದಾರೆ.
ಸೆಪ್ಟೆಂಬರ್ 24ರಂದು ಗಿರೀಶ್ ಮಟ್ಟಣ್ಣವರ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಪ್ರತಿಭಟನೆಯಲ್ಲಿ ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳುವಂತೆ ಕರೆ ಕೊಟ್ಟಿದ್ರು. ಆತ್ಮವಿದ್ದವರು ಮತ್ತೊಂದು ಆತ್ಮಕ್ಕೆ ಶಾಂತಿ ನ್ಯಾಯ ಬಯಸುವರು ಬನ್ನಿ. ನಾಳೆ ನನಗೂ, ನಮ್ಮ ಪ್ರೀತಿ ಪಾತ್ರರಿಗೆ ಇದೇ ರೀತಿ ಅನ್ಯಾಯ ಆಗಬಾರದು ಎನ್ನುವರು ಬನ್ನಿ. ಈ ಮಣ್ಣು, ಹೆಣ್ಣನ್ನು ಅತ್ಯಾಚಾರದಿಂದ ಮುಕ್ತ ಮಾಡಬೇಕೆನ್ನುವರು, ನಮ್ಮ ಕುಟುಂಬದ ಸುರಕ್ಷೆ ಬೇಕೆನ್ನುವರು ಬನ್ನಿ.
ಧರ್ಮಸ್ಥಳದ ದೇವಸ್ಥಾನ ತೋರಿಸಿ ಅದರ ಹಿಂದೆ ಅಡಗಿ ಕುಳಿತ, ಅತ್ಯಾಚಾರಿ ಕೊಲೆಗಡುಕ ನಕಲಿ ದೇವಮಾನವ ಕುಟುಂಬ, ಜೈಲು ಪಾಲಾಗಬೇಕೆಂದು ಮಂಜುನಾಥ ಸ್ವಾಮಿಗೆ ಬೇಡಿಕೊಂಡವರು ಬನ್ನಿ. ಸೌಜನ್ಯಾಳಿಗೆ ನ್ಯಾಯ ಸಿಗಬೇಕು ಎಂದು ಪ್ರಾರ್ಥನೆ ಮಾಡುವರು ತಪ್ಪದೇ ಬನ್ನಿ ಎಂದು ಕರೆ ಕೊಟ್ಟಿದ್ರು.
ಗಿರೀಶ್ ಮಟ್ಟಣ್ಣವರ್ ಅವರ ಈ ಕರೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ನ್ಯಾಯ ಸಮಾವೇಶದಲ್ಲಿ ಸಿಪಿಐಎಂ ಪಾಲಿಟ್ ಬ್ಯುರೋ ಮೆಂಬರ್ ಹಾಗೂ ಮಾಜಿ ಸಂಸದರಾದ ಸುಭಾಷಿಣಿ ಅಲಿ, ದಲಿತ ಹೋರಾಟಗಾರ, ಮಾವಳ್ಳಿ ಶಂಕರ್ ಹಾಗೂ ಸಾಹಿತಿಗಳಾದ ಪ್ರೊ. ಎಸ್.ಜಿ ಸಿದ್ದರಾಮಯ್ಯ ಸೇರಿದಂತೆ ಹಲವರು ಭಾಗಿಯಾಗಿ ತಮ್ಮ ಬೆಂಬಲ ನೀಡಿದ್ದಾರೆ.

