Sunday, December 22, 2024

Latest Posts

ದೇಶದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರಕ್ಕಾಗಿ ವಿಷನ್‌ ಡಾಕ್ಯುಮೆಂಟ್‌, ಇದು ಐತಿಹಾಸಿಕ ದಿನ – ಸಚಿವ ಡಾ.ಕೆ.ಸುಧಾಕರ್‌

- Advertisement -

ಬೆಂಗಳೂರು: ಇಡೀ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದ ದೂರದೃಷ್ಟಿಗಾಗಿ ʼಕರ್ನಾಟಕ ವಿಷನ್‌ ವರದಿʼ ಹೊರತರಲಾಗಿದೆ. ಇದು ಐತಿಹಾಸಿಕ ದಿನವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಬಣ್ಣಿಸಿದರು.

ವಿಧಾನಸೌಧದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿ, ʼಕರ್ನಾಟಕ ವಿಷನ್‌ ವರದಿʼ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್‌, ಡಾ.ಗುರುರಾಜ್‌ ನೇತೃತ್ವದ ತಂಡ ಒಂದು ವರ್ಷ ಕಾಲ ಅಧ್ಯಯನಗಳು, ಸಂಶೋಧನೆಗಳು, ಸಭೆಗಳನ್ನು ನಡೆಸಿ ಈ ವರದಿ ರೂಪಿಸಿದೆ. 250 ಕ್ಕೂ ಅಧಿಕ ತಜ್ಞರು ಈ ವರದಿ ರೂಪಿಸಲು ಸಲಹೆ ನೀಡಿದ್ದಾರೆ. ಬೇರೆ ದೇಶಗಳ ಉತ್ತಮ ಕ್ರಮಗಳನ್ನು ಕೂಡ ಇಲ್ಲಿ ದಾಖಲಿಸಲಾಗಿದೆ. ಟೆಲಿ ಮೆಡಿಸಿನ್‌, ಗ್ರಾಮೀಣ ಪ್ರದೇಶದಿಂದ ಆರಂಭವಾಗಿ ತೃತೀಯ ಹಂತದ ಆರೋಗ್ಯ ಸೇವೆ ಸೇರಿದಂತೆ ಅನೇಕ ಅಂಶಗಳನ್ನು ಇದು ಒಳಗೊಂಡಿದೆ. ಇದನ್ನು ಮುಖ್ಯಮಂತ್ರಿಗಳು ಪ್ರಧಾನಿಗಳಿಗೂ ನೀಡಲಿದ್ದಾರೆ ಎಂದರು.

ಅನೇಕರು ವೈದ್ಯರ ಕೈ ಗುಣ ನಂಬುತ್ತಾರೆ. ರೋಗಿಗಳಿಗೆ ವೈದ್ಯರ ಮೇಲೆ ಇರುವ ನಂಬಿಕೆ, ಪ್ರೀತಿಯನ್ನು ಇದು ತೋರಿಸುತ್ತದೆ. ಹಾಗೆಯೇ ವೈದ್ಯರು ಹಾಗೂ ರೋಗಿಗಳ ನಡುವಿನ ಬಾಂಧವ್ಯವನ್ನು ಸೂಚಿಸುತ್ತದೆ. ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲವೆಂದೇ ವೈದ್ಯರನ್ನು ಸೃಷ್ಟಿಸಲಾಗಿದೆ ಎಂದೂ ಹೇಳಲಾಗುತ್ತದೆ. ಆ ಮಟ್ಟಿಗೆ ಸಮಾಜ ವೈದ್ಯರನ್ನು ಗೌರವಿಸುತ್ತದೆ ಎಂದರು.

ಮೂರನೇ ಡೋಸ್‌ನಲ್ಲಿ ಶೇ.100 ರಷ್ಟು ಸಾಧನೆಗೆ ಶ್ರಮಿಸಿ

ಕಳೆದ ನೂರು ವರ್ಷಗಳಲ್ಲೂ ಕಾಣದ ಕೋವಿಡ್‌ ಸಾಂಕ್ರಾಮಿಕವನ್ನು ನಾವೆಲ್ಲರೂ ಎದುರಿಸಿದ್ದೇವೆ. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರ ಯಶಸ್ಸು ಕಾಣಲು ವೈದ್ಯರೇ ಪ್ರಮುಖ ಕಾರಣರಾಗಿದ್ದಾರೆ. ಕೋವಿಡ್‌ ಲಸಿಕಾಕರಣದಲ್ಲಿ ಎರಡು ಡೋಸ್‌ಗಳಲ್ಲಿ ಶೇ.100 ರಷ್ಟು ಸಾಧನೆ ಆಗಿದೆ. ಇದಕ್ಕೂ ವೈದ್ಯರ ಶ್ರಮವೇ ಕಾರಣವಾಗಿದೆ. ಹಾಗೆಯೇ, ಮೂರನೇ ಡೋಸ್‌ನಲ್ಲೂ ಶೇ.100 ರಷ್ಟು ಸಾಧನೆ ಮಾಡಲು ಎಲ್ಲಾ ವೈದ್ಯರು ಶ್ರಮಿಸಬೇಕು ಎಂದು ಸಚಿವರು ಕೋರಿದರು.

ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಈವರೆಗೆ ಕೆಡರ್‌ ಮಾಡಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಸಮಿತಿ ರಚಿಸಿದ್ದು, ಆ ವರದಿಯ ಅನ್ವಯ ಕ್ರಮ ವಹಿಸಲಾಗುತ್ತದೆ. ಇದು ಕೂಡ ಐತಿಹಾಸಿಕ ಹಾಗೂ ಕ್ರಾಂತಿಕಾರಿಕ ನಿರ್ಣಯ ಎಂದರು.

ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆಗೆ ಸರ್ಕಾರ ಆದ್ಯತೆ ನೀಡಿದ್ದು, ಉತ್ತರ ಕರ್ನಾಟಕ ಸೇರಿದಂತೆ ಅಭಿವೃದ್ಧಿ ವಂಚಿತ ಜಿಲ್ಲೆಗಳಲ್ಲಿ 100 ಸಮುದಾಯ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಒಂದು ತಿಂಗಳಲ್ಲೇ ಇದಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ನಗರಗಳಲ್ಲಿ ಬಿಪಿಎಲ್‌ ಕುಟುಂಬಗಳು ಹೆಚ್ಚಿರುವ ಸ್ಥಳಗಳಲ್ಲಿ ʼನಮ್ಮ ಕ್ಲಿನಿಕ್‌ʼ ಆರಂಭಿಸಲಾಗುತ್ತಿದೆ. ಎರಡು ತಿಂಗಳೊಳಗೆ ಬೆಂಗಳೂರಿನಲ್ಲಿ 243 ಕ್ಲಿನಿಕ್‌ ಕಾರ್ಯಾರಂಭವಾಗಲಿದೆ ಎಂದರು.

ಇತರೆ ಅಂಶಗಳು

ಇ-ಸಂಜೀವಿನಿ ಸೇವೆಯಲ್ಲಿ ರಾಜ್ಯ 2 ನೇ ಸ್ಥಾನದಲ್ಲಿದ್ದು, 50 ಲಕ್ಷ ಸಮಾಲೋಚನೆ ನಡೆದಿದೆ. ಹಳ್ಳಿಗಳ ಜನರು ಕೂಡ ಈ ಸೇವೆ ಬಳಸಿಕೊಳ್ಳುತ್ತಿದ್ದಾರೆ. ಕೋವಿಡ್‌ ರೋಗಿಗಳಿಗಾಗಿ ಆರಂಭಿಸಿದ ಕೌನ್ಸಿಲಿಂಗ್‌ನಲ್ಲೂ ಸಾಕಷ್ಟು ಸಾಧನೆಯಾಗಿದೆ.

ಕೆಲ ವೈದ್ಯರ ವರ್ತನೆಯಿಂದ ಇಡೀ ವೈದ್ಯ ಸಮೂಹಕ್ಕೆ ಕೆಟ್ಟ ಹೆಸರು ಬರುತ್ತಿದೆ. ಈ ಬಗ್ಗೆ ಚಿಂತನೆ ನಡೆಸಬೇಕು.

ಕರ್ನಾಟಕ ಆರೋಗ್ಯಯುತವಾದರೆ ಸಂಪತ್ಭರಿತವಾಗುತ್ತದೆ. ಇದಕ್ಕಾಗಿ ಎಲ್ಲಾ ವೈದ್ಯರು ಒಂದು ತಂಡವಾಗಿ ಕಾರ್ಯ ನಿರ್ವಹಿಸಬೇಕು.

- Advertisement -

Latest Posts

Don't Miss