ಹುಲಿ ಸೆರೆ ಹಿಡಿಯಲು ವಿಫಲವಾಗಿದ್ದಕ್ಕೇ, ಅರಣ್ಯ ಇಲಾಖೆ ಅಧಿಕಾರಿಗಳನ್ನೇ ಹುಲಿ ಬೋನಿನಲ್ಲಿ ಕೂಡಿ ಹಾಕಲಾಗಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಸುಮಾರು 12ಕ್ಕೂ ಅಧಿಕ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು, ರೈತರು ಬೋನಿನೊಳಗೆ ಹಾಕಿ ದಿಗ್ಬಂಧನ ವಿಧಿಸಿದ್ದಾರೆ.
ಬೊಮ್ಮಲಾಪುರ ಗ್ರಾಮದ ಗಂಗಪ್ಪ ಎಂಬುವರ ಜಮೀನಿನ ಸುತ್ತಮುತ್ತ, ಕೆಲ ತಿಂಗಳಿಗಳಿಂದ ಹುಲಿ-ಚಿರತೆ ಉಪಟಳ ಹೆಚ್ಚಾಗಿತ್ತು. ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದವು. ರೈತರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಗಂಗಪ್ಪ ಜಮೀನಿನಲ್ಲಿ ಬೋನ್ ಇರಿಸಿತ್ತು. ನಂತರ ಅರಣ್ಯಾಧಿಕಾರಿಗಳು ಇತ್ತ ಸುಳಿಯಲೇ ಇಲ್ಲ. ಕಳೆದ ಮೂರು ದಿನಗಳ ಹಿಂದೆ ಕರು ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಮಾಹಿತಿ ನೀಡಿದ್ದರೂ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು.
ಸೆಪ್ಟೆಂಬರ್ 9ರಂದು ಮಂಗಳವಾರ ಬೆಳಗ್ಗೆ ಹುಲಿ ಓಡಾಟ ಕಂಡುಬಂದಿದೆ. ರೈತರು ಆತಂಕಗೊಂಡು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ನಿಗದಿತ ಸಮಯಕ್ಕೆ ಬರದೆ, ತಡವಾಗಿ ಅಧಿಕಾರಿಗಳು ಆಗಮಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು, ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬೋನಿನಲ್ಲಿ ಕೂಡಿಹಾಕಿದ್ರು.
ಸುದ್ದಿ ತಿಳಿಯುತ್ತಿದ್ದಂತೆ ಗುಂಡ್ಲುಪೇಟೆ ಎಸಿಎಫ್ ಸುರೇಶ್ ಹಾಗೂ ಬಂಡೀಪುರ ಎಸಿಎಫ್ ನವೀನ್ ಕುಮಾರ್, ಡಿಆರ್‍ಎಫ್‍ಓ ಸ್ಥಳಕ್ಕೆ ದೌಡಾಯಿಸಿದ್ರು. ರೈತರ ಮನವೊಲಿಸಿ, ಕೂಡಲೇ ಸಾಕಾನೆ ಬಳಕೆ ಮಾಡಿಕೊಂಡು, ಹುಲಿ ಸೆರೆಗೆ ಕೂಂಬಿಂಗ್ ಆರಂಭಿಸುವ ಭರವಸೆ ನೀಡಿದರು. ಬಳಿಕ ಹುಲಿ ಬೋನಿನಲ್ಲಿ ಕೂಡಿ ಹಾಕಿದ್ದ ಅಧಿಕಾರಿಗಳು, ಸಿಬ್ಬಂದಿಯನ್ನು, ರೈತರು ಬಂಧಮುಕ್ತಗೊಳಿಸಿದ್ದಾರೆ.

