“ಕಾಮಿಡಿ ಕಿಲಾಡಿ”ಗಳಿಂದ ಹಿಂದೂ ದೇವರಿಗೇ ಅಪಮಾನ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಕಾಮಿಡಿ ಕಿಲಾಡಿಗಳು ಶೋ ತುಂಬ ಫೇಮಸ್ ಅನ್ನೋದ್ ಎಲ್ಲರಿಗೂ ಗೊತ್ತೇ ಇದೆ, ಜೊತೆಗೆ ಎಷ್ಟೇ ಕೆಲಸದಲ್ಲಿ ಬ್ಯುಸಿ ಇದ್ರೂ ಸಂಜೆ ಆದ್ರೆ ಒಂದು ಗಂಟೆ ಕಾಮಿಡಿ ಶೋ ನೋಡ್ತಾ ನೋಡ್ತಾ ನಮ್ಮ ದಿನನಿತ್ಯದ ಒತ್ತಡವನ್ನ ಮರೀತೀವಿ .

ಆದ್ರೆ ಈ ಒಂದು ಕಾಮಿಡಿ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳ ಕುರಿತು ಅಪಮಾನಕರ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದಕ್ಕೆ ಹೈಕೋರ್ಟ್ ಬೇಸರ ಹೊರಹಾಕಿದೆ. ಹಾಸ್ಯ, ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ಈ ದೇಶದಲ್ಲಿ ಏನಾದರೂ ನಡೆಯಬಹುದೇ ಎಂದು ತೀಕ್ಷ್ಯವಾಗಿ ಪ್ರಶ್ನಿಸಿದೆ.

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳ ಕುರಿತು ನಿಂದಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದೆ. ಹುಬ್ಬಳ್ಳಿ ಮೂಲದ ಪ್ರಶಾಂತ್ ಶಶಿಧರ್‌ ನರಗುಂದ ಎಂಬುವರು ಸುಬ್ರಮಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ರು. ಈ ದೂರು ರದ್ದುಪಡಿಸುವಂತೆ ಕೋರಿ ಕಾರ್ಯಕ್ರಮದ ಆಯೋಜಕ ಕೆ. ಅನಿಲ್ ಕುಮಾರ್‌ ಅರ್ಜಿ ಸಲ್ಲಿಸಿದ್ರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳು, ಕಾರ್ಯಕ್ರಮದ ಆಯೋಜಕರನ್ನುತರಾಟೆಗೆ ತೆಗೆದುಕೊಂಡರು. ಕೃಷ್ಣ, ದ್ರೌಪದಿ, ಧೃತರಾಷ್ಟ್ರರ ಬಗ್ಗೆ ಅಸಭ್ಯವಾಗಿ ಹಾಸ್ಯ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಓದುವುದಕ್ಕೂ ಮುಜುಗರ ಆಗುವಂತಹ ಪದಗಳನ್ನು ಬಳಸಲಾಗಿದೆ.

ಹಾಸ್ಯ, ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ಈ ದೇಶದಲ್ಲಿ ಏನಾದರೂ ನಡೆಯಬಹುದೇ. ನ್ಯಾಯಾಲಯಗಳು ಹೆಚ್ಚು ಉದಾರವಾಗಿರುವುದರಿಂದ ಇಂತಹದ್ದೆಲ್ಲಾ ನಡೆಯುತ್ತಿದೆ. ನ್ಯಾಯಾಲಯಗಳು ಕಠಿಣವಾದರೆ ವಿಷಯವೇ ಬೇರೆ ಆಗುತ್ತದೆ ಎಂದು ಜಡ್ಜ್‌ ಗರಂ ಆಗಿದ್ದಾರೆ.

ಇನ್ನು, ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಆರೋಪಿತ ಅರ್ಜಿದಾರರು ತನಿಖೆಗೆ ಸಹಕರಿಸಬೇಕು. ಹಾಗೂ ತನಿಖೆ ನೆಪದಲ್ಲಿ ಪೊಲೀಸರು ಅರ್ಜಿದಾರರನ್ನು ಬಂಧಿಸಬಾರದು ಎಂದು ಹೇಳಿ ವಿಚಾರಣೆ ಮುಂದೂಡಿದೆ

About The Author