ಇಂದು ನಡೆದ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬರೀ ಒಂದು ಸ್ಥಾನ ಮಾತ್ರ ಗಳಿಸಿದ್ದು, ಹಾಸನದಲ್ಲಿ ರೇವಣ್ಣನವರ ಮಗ ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದಾರೆ. ಉಳಿದ ಯಾವ ಸ್ಥಳದಲ್ಲಿಯೂ ಜೆಡಿಎಸ್ ಗೆಲುವು ಸಾಧಿಸಲಿಲ್ಲ. ಹೀಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು, ಜನ ಬಲ ಸೋತಿದೆ ಅನ್ನೋದಕ್ಕೆ ಬೇಸರವಾಗಿದೆ, ಆದ್ರೆ 2023ರಲ್ಲಿ ವಿಧಾನಸಭೆ ಚುನಾವಣಿಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ. ರಾಷ್ಟ್ರೀಯ ಪಕ್ಷಗಳ ಹಣದ ಅಬ್ಬರದಲ್ಲಿ ನಾವು ಹಿನ್ನಡೆ ಅನುಭವಿಸಿದ್ದೇವೆ. ಆಣೆ, ಪ್ರಮಾಣಗಳ ನಡುವೆಯೂ ನೈತಿಕ ನೆಲೆಯಲ್ಲಿ ಸೆಣಸಿದ್ದೇವೆ ಎಂದು ಕುಮಾರಸ್ವಾಮಿ ಟ್ವೀಟಿಸಿದ್ದಾರೆ.
2023ರ ವಿಧಾನಸಭೆ ಚುನಾವಣೆಯೇ ನಮ್ಮ ಗುರಿ ಎಂದು ಹಿಂದೆಯೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಆ ನಿಟ್ಟಿನಲ್ಲಿ ನಮ್ಮ ತಯಾರಿ ನಡೆದಿದೆ. ಆದರೂ ಈ ಚುನಾವಣೆಯಲ್ಲಿ ಪ್ರಯತ್ನ ಮಾಡಿದ್ದೇವೆ. ʼದೊಡ್ಡ ಪಕ್ಷಗಳ ಕಾಂಚಾಣ ಹಂಚಿಕೆʼ ನಡುವೆ ನಾವು ಹಿಂದೆ ಬಿದ್ದಿದ್ದೇವೆ ಎಂದು ಹೆಚ್ಡಿಕೆ ಟಾಂಗ್ ನೀಡಿದ್ದಾರೆ.
ಚುನಾವಣೆ ಎಂದರೆ ಸೋಲು-ಗೆಲುವು. ಗೆಲುವಿಗಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವರೇ ನಮ್ಮ ಶಕ್ತಿ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು. ಈಗ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಹಣಬಲದಿಂದ ಎದುರಾಗುವ ಇಂಥ ಸೋಲುಗಳಿಗೆ ಜೆಡಿಎಸ್ ಎಂದೂ ಧೃತಿಗೆಡುವುದಿಲ್ಲ ಎಂದು ಮಾಜಿ ಸಿಎಂ ಟ್ವೀಟ್ ಮಾಡಿದ್ದಾರೆ.
ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಈ ಚುನಾವಣೆಯ ಮತದಾರರು. ಜನರೇ ನೇರವಾಗಿ ಹಕ್ಕು ಚಲಾಯಿಸುವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂಬುದು ತಿಳಿಯಲಿದೆ. ಪಕ್ಷ ಮತ್ತೆ ಪುಟಿದೆದ್ದು ಬರಲಿದೆ. ಜನರಲ್ಲಿ ಜೆಡಿಎಸ್ ಬಗೆಗಿನ ವಿಶ್ವಾಸವನ್ನು ಅಳಿಸಲಾಗದು ಎಂದು ಜನತೆ ಬಗ್ಗೆ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊನೆಯದಾಗಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಈ ಚುನಾವಣೆಯಲ್ಲಿ ಜಯ ಗಳಿಸಿದ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೆ ನನ್ನ ಶುಭಾಶಯಗಳು ಎಂದು ಶುಭಾಶಯ ತಿಳಿಸಿದ್ದಾರೆ.