ಛತ್ತೀಸ್‌ಗಢದ ಸಾವಿರಾರು ಕೋಟಿಯ ಮದ್ಯ ಹಗರಣ ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಮಾಜಿ ಸಿಎಂ ಭೂಪೇಶ್ ಬಘೇಲ್ ಅವರ ಮನೆ ಮೇಲೆ ದಿಢೀರ್ ದಾಳಿ ಮಾಡಿತ್ತು. ED ದಾಳಿ ಬೆನ್ನಲ್ಲೇ ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ಬಂಧಿಸಲಾಗಿದೆ.
ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಭೂಪೇಶ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಭಿಲಾಯಿ ಅಲ್ಲಿರುವ ಭೂಪೇಶ್ ನಿವಾಸದಲ್ಲೇ ಅವರ ಮಗ ಕೂಡ ವಾಸವಿದ್ದಾರೆ. ಈ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಪ್ರಕರಣ ಸಂಬಂಧ ಹೊಸ ಸಾಕ್ಷ್ಯ ಆಧಾರದ ಮೇಲೆ ದಾಳಿ ನಡೆಸಿದ್ದಾರೆ. ಈ ವರ್ಷ ಮಾರ್ಚ್ನಲ್ಲೂ ಕೂಡ ಚೈತನ್ಯ ಬಘೇಲ್ ಅವರ ವಿರುದ್ಧ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದರು.
ಈ ಕುರಿತು ತಮ್ಮ ಎಕ್ಸ್ ಜಾಲತಾಣದಲ್ಲಿ ಮಾಜಿ ಸಿಎಂ ಭೂಪೇಶ್ ಬಘೇಲ್ ಪೋಸ್ಟ್ ಮಾಡಿದ್ದಾರೆ. ಇಂದು ಛತ್ತೀಸ್‌ಗಢ ವಿಧಾನಸಭೆ ಅಧಿವೇಶನಕ್ಕೆ ಕಡೆಯ ದಿನವಾಗಿದೆ. ಅದಾನಿಗಾಗಿ ತಮ್ನಾರ್‌ನಲ್ಲಿ ಮರಗಳನ್ನು ಕಡಿಯುತ್ತಿರುವ ವಿಚಾರವನ್ನು ಇಂದು ಪ್ರಸ್ತಾಪಿಸಬೇಕಿತ್ತು. ಆದರೆ ಭಿಲಾಯಿ ನಿವಾಸಕ್ಕೆ ‘ಸಾಹೇಬ್’ ಇ.ಡಿಯನ್ನು ಕಳುಹಿಸಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.
ಸದ್ಯ ಮದ್ಯ ಹಗರಣದಲ್ಲಿನ ಸಿಕ್ಕ ಹೊಸ ಸಾಕ್ಷ್ಯ ಆಧಾರದ ಮೇಲೆ ಪಿಎಂಎಲ್ಎ ಅಡಿಯಲ್ಲಿ ಈ ಶೋಧ ಕಾರ್ಯ ಸಾಗಿದೆ. ಇ.ಡಿ ಆರೋಪದ ಪ್ರಕಾರ, ಛತ್ತೀಸ್‌ಗಢ ಮದ್ಯ ಹಗರಣದಿಂದ ರಾಜ್ಯ ಸರ್ಕಾರಕ್ಕೆ ಭಾರೀ ನಷ್ಟ ಉಂಟಾಗಿದೆ. ಇದರಿಂದ, 2,100 ಕೋಟಿ ರೂ.ಗಳಿಗೂ ಹೆಚ್ಚು ಅಕ್ರಮ ಆದಾಯ ಗಳಿಸುವ ಮೂಲಕ ಮದ್ಯದ ಸಿಂಡಿಕೇಟ್ ಶ್ರೀಮಂತವಾಗಿದೆ. ಮದ್ಯ ಹಗರಣದ ಆದಾಯವನ್ನು ಚೈತನ್ಯ ಬಘೇಲ್ ಪಡೆದಿರುವ ಶಂಕೆ ಇದೆ ಎಂದು ಈ ಹಿಂದೆ ಜಾರಿ ನಿರ್ದೇಶನಾಲಯ ತಿಳಿಸಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ