ತುಮಕೂರು: ಭಾರೀ ಮಳೆಯಿಂದಾಗಿ ಕೊರಟಗೆರೆ ತಾಲೂಕಿನಲ್ಲಿ ಉಂಟಾಗಿದ್ದಂತ ನೆರೆ ಪರಿಸ್ಥಿತಿಯನ್ನು ವೀಕ್ಷಿಸೋದಕ್ಕೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ತೆರಳಿದ್ದರು. ಅವರು ನೆರೆ ವೀಕ್ಷಿಸಿ, ಸೇತುವೆಯ ಮೇಲಿನಿಂದ ವಾಪಾಸ್ ಆದ ಕೆಲವೇ ನಿಮಿಷಗಳಲ್ಲಿ ಸೇತುವೆ ಕುಸಿತಗೊಂಡ ಪರಿಣಾಮ, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಅವರು ಪಾರಾಗಿರೋ ಘಟನೆ ಇಂದು ನಡೆದಿದೆ.
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು, ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತುಮಕೂರು ಜಿಲ್ಲೆಯ ಗೊರವನಹಳ್ಳಿ-ತೀತಾ ರಸ್ತೆಯಲ್ಲಿ ಸೇತುವೆ ಭಾಗಶಹ ಕುಸಿದಿದ್ದನ್ನು ವೀಕ್ಷಿಸಲು ಅಧಿಕಾರಿಗಳೊಂದಿಗೆ ತೆರಳಿದ್ದರು.
ಗೊರವನಹಳ್ಳಿ-ತೀತಾ ಸೇತುವೆ ಭಾಗಶಹ ಕುಸಿತಗೊಂಡಿದ್ದನ್ನು ಸೇತುವೆಯ ಮೇಲೆ ನಿಂತು ವೀಕ್ಷಿಸಿದ್ದರು. ಈ ಬಳಿಕ ಅಲ್ಲಿಂದ ಅವರು ತೆರಳಿದಂತ ಐದೇ ನಿಮಿಷದಲ್ಲಿ ಸಂಪೂರ್ಣ ಸೇತುವೆ ಕುಸಿತಗೊಂಡಿದೆ. ಹೀಗಾಗಿ ಅದೃಷ್ಠವಶಾತ್ ಅವರು, ಹಾಗೂ ಅವರೊಟ್ಟಿಗೆ ಬಂದಿದ್ದಂತ ಅಧಿಕಾರಿಗಳು, ಸಾರ್ವಜನಿಕರು ಭಾರೀ ಅನಾಹುತದಿಂದ ಪಾರಾದಂತೆ ಆಗಿದೆ.