Monday, April 21, 2025

Latest Posts

ಇವರಿಂದಲೇ ನನ್ನ ಮೇಲೆ ದಾಳಿ ನಡೆದಿದೆ : ರಿಕ್ಕಿ ರೈ ಬಿಚ್ಚಿಟ್ರು ಸ್ಫೋಟಕ ಮಾಹಿತಿ..!

- Advertisement -

ಬೆಂಗಳೂರು : ಕಳೆದರೆಡು ದಿನಗಳ ಹಿಂದಷ್ಟೇ ಬೀಕರ ಗುಂಡಿನ ದಾಳಿಗೆ ತುತ್ತಾಗಿ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಪೊಲೀಸರಿಗೆ ತಮ್ಮ ಹೇಳಿಕೆ ನೀಡಿದ್ದಾರೆ. ಇನ್ನೂ ರಿಕ್ಕಿ ರೈ ಇರುವ ಆಸ್ಪತ್ರೆಗೆ ತೆರಳಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರ ಎದುರು ರಿಕ್ಕಿ ರೈ ಹಲವು ಸ್ಫೋಟಕ ಸಂಗತಿಗಳನ್ನು ಬಯಲಿಗೆ ತಂದಿದ್ದಾರೆ.

ಕೋರ್ಟ್‌ ಕೆಲಸದ ಮೇಲೆ ಬಂದಿದ್ದೆ..

ಇನ್ನೂ ಮುಖ್ಯವಾಗಿ ಆಸ್ತಿ ವಿಚಾರ ಮುಂದಿಟ್ಟುಕೊಂಡು ನನ್ನ ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯ ಹಿಂದೆ ರಾಕೇಶ್ ಮಲ್ಲಿ, ಅನುರಾಧಾ, ನಿತೀಶ್ ಶೆಟ್ಟಿ, ವೈದ್ಯನಾಥನ್ ಕೈವಾಡವಿದೆ ಎಂದು ರಿಕ್ಕಿ ರೈ ಸ್ಫೋಟಕವಾಗಿ ಆರೋಪಿಸಿದ್ದಾರೆ. ಅಲ್ಲದೆ ಇದಕ್ಕೂ ಮೊದಲು ನಾನು ರಷ್ಯಾದಲ್ಲಿದ್ದೆ. ನಮ್ಮ ಜಮೀನು ವಿವಾದದ ಕೇಸ್ ಕೋರ್ಟ್‌ನಲ್ಲಿ‌ ಮುಂದುವರೆದಿತ್ತು . ಹೀಗಾಗಿ, ನಾನು ಕೋರ್ಟ್‌ ಕೆಲಸದ ನಿಮಿತ್ತ ರಷ್ಯಾದಿಂದ ಬೆಂಗಳೂರಿಗೆ ಬಂದಿದ್ದೆ. ಆಗಾಗ ನಾನು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಸದಾಶಿವನಗರ ಮತ್ತು ಬಿಡದಿಯಲ್ಲಿ ಇರುತ್ತೇನೆ. ಹೀಗೆ ಬಂದಿದ್ದ ನಾನು ರಾತ್ರಿ ಬಿಡದಿಯಿಂದ ಸದಾಶಿವನಗರದ ಮನೆಗೆ ಹೋಗುವಾಗ ನನ್ನ ಮೇಲೆ ಅಟ್ಯಾಕ್‌ ಮಾಡಿ ಫೈರಿಂಗ್‌ ಮಾಡಲಾಗಿತ್ತು, ಆಗ ಗಾಯಗೊಂಡಿದ್ದ ನನ್ನನ್ನು ಸ್ನೇಹಿತರು, ಕಾರು ಚಾಲಕ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ರಿಕ್ಕಿ ರೈ ತಮ್ಮ ಹೇಳಿಕೆಯನ್ನು ಪೊಲೀಸರಿಗೆ ನೀಡಿದ್ದಾರೆ.

ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವ ಖಾಕಿ..

ಅಲ್ಲದೆ ರಿಕ್ಕಿ ರೈ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಇನ್ನಷ್ಟು ವೇಗವಾಗಿ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಅನುಮಾನಾಸ್ಪದ ವ್ಯಕ್ತಿಗಳಿಗೆ ನೋಟಿಸ್‌ ನೀಡಲು ಪೊಲೀಸರು ಸಿದ್ದತೆ ನಡೆಸಿದ್ದಾರೆ. ಅಲ್ಲದೆ ರಿಕ್ಕಿ ರೈ ಅವರ ಮಲತಾಯಿ ಈ ಘಟನೆಗೂ 5 ದಿನಗಳ ಮುನ್ನವೇ ದೇಶವನ್ನು ಬಿಟ್ಟು ವಿದೇಶಕ್ಕೆ ತೆರಳಿದ್ದಾರೆ. ಇನ್ನೂ ಪ್ರಮುಖವಾಗಿ ಈ ಪ್ರಕರಣದಲ್ಲಿ ರಿಕ್ಕಿ ರೈ ಅವರ ಆಸ್ತಿ, ಕಂಪನಿಗಳು, ಪಾಲುದಾರಿಕೆ, ಹೂಡಿಕೆ, ರಿಯಲ್‌ ಎಸ್ಟೇಟ್‌ ವ್ಯವಹಾರ, ಹಣಕಾಸಿನ ವ್ಯವಹಾರ ಸೇರಿದಂತೆ ಅನೇಕರೊಂದಿಗಿನ ವ್ಯಾಜ್ಯಗಳ ಬಗ್ಗೆ ಪೊಲೀಸರ ತಂಡ ಮಾಹಿತಿ ಪಡೆಯುತ್ತಿದೆ. ಅಲ್ಲದೆ ಅವರ ವಿರುದ್ಧ ದಾಖಲಾಗಿರುವ ದೂರುಗಳ ಬಗ್ಗೆಯೂ ಪೊಲೀಸರು ವಿವರಗಳನ್ನು ಕಲೆ ಹಾಕುತ್ತಿದ್ದಾರೆ.

ಸಿಸಿಟಿವಿ, ಮೊಬೈಲ್‌ ಕರೆ ಪರಿಶೀಲನೆ..

ಇನ್ನೂ ರಿಕ್ಕಿ ರೈ ಮೇಲಿನ ದಾಳಿಯ ಕುರಿತು ಅವರ ಮನೆಯ ಕಾರ್ಮಿಕರು, ಅಡುಗೆಯವರು, ಚಾಲಕರು ಹಾಗೂ ಅಂಗ ರಕ್ಷಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ಪ್ರಮುಖವಾಗಿ ರಿಕ್ಕಿ ರೈ ಅವರ ದಾಳಿಯ ಹಿಂದೆ ಯಾರ ಕೈವಾಡವಿದೆ ಎನ್ನುವುದನ್ನು ಈ ಎಲ್ಲರ ಮೊಬೈಲ್‌ ಕರೆಗಳು ಹಾಗೂ ಬಿಡದಿಯ ಮನೆಯ ಸುತ್ತಮುತ್ತಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಖಾಕಿ ಪಡೆ ಪರಿಶೀಲನೆ ನಡೆಸುತ್ತಿದೆ.

ಕೈ ಕಾರ್ಯಕರ್ತನ ಪಾತ್ರದ ಮಾಹಿತಿ ಇಲ್ಲ..

ಇನ್ನೂ ಇದೇ ಘಟನೆಗೆ ಸಂಬಂಧಿಸಿದ್ದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಉದ್ಯಮಿ ರಿಕ್ಕಿ ರೈ ಕಾರಿನ ಮೇಲೆ ಗುಂಡಿನ ದಾಳಿಯ ಪ್ರಕರಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ರಾಕೇಶ್‌ ಮಲ್ಲಿ ಭಾಗಿಯಾಗಿರುವ ವಿಚಾರ ನನಗೆ ಗೊತ್ತಿಲ್ಲ. ತನಿಖೆ ಬಳಿಕ ಯಾರೆಂದು ಗೊತ್ತಾಗಲಿದೆ. ಇಂತಹ ವಿಷಯದಲ್ಲಿ ಉಹಾಪೋಹ ಮಾಡಲಾಗದು ಎಂದು ಅವರು ತಿಳಿಸಿದ್ದಾರೆ.

ಏನಿದು ಪ್ರಕರಣ..?

ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಕಳೆದ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ನಡೆದಿತ್ತು. ಇನ್ನೂ ರಾಮನಗರ ಬಿಡದಿಯಲ್ಲಿರುವ ಅವರ ನಿವಾಸದ ಎದುರು ರಿಕ್ಕಿ ರೈ ಮೇಲೆ ಅಟ್ಯಾಕ್‌ ಮಾಡಲಾಗಿತ್ತು.

ಇನ್ನೂ ರಿಕ್ಕಿ ರೈ ನಾಲ್ಕು ದಿನಗಳ ಹಿಂದಷ್ಟೇ ರಷ್ಯಾ ಪ್ರವಾಸ ಮುಗಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅಲ್ಲದೆ ತಡ ರಾತ್ರಿ 1 ಗಂಟೆಯ ಸುಮಾರಿಗೆ ಬಿಡದಿ ಮನೆಯಿಂದ ಬೆಂಗಳೂರಿನತ್ತ ಹೊರಡುತ್ತಿದ್ದ ಕಾರಿನಲ್ಲಿ ರಿಕ್ಕಿ ರೈ ಇದ್ದರು. ಅಲ್ಲದೆ ಕಾರು ಇನ್ನೇನು ಕಂಪೌಂಡ್‌ ದಾಟಿತು ಅನ್ನೋವಷ್ಟರಲ್ಲಿಯೇ ಎದುರುಗಿನ ಕಂಪೌಂಡ್‌ನಲ್ಲಿ ಅಡಗಿಕೊಂಡಿದ್ದ ದುಷ್ಕರ್ಮಿಗಳು ನೇರವಾಗಿ ರಿಕ್ಕಿ ರೈ ಅವರನ್ನು ಟಾರ್ಗೆಟ್‌ ಮಾಡಿ ಗುಂಡು ಹಾರಿಸಿದ್ದರು.

ಆದರೆ ಪ್ರತಿ ಸಲ ಕಾರು ಚಲಾಯಿಸುತ್ತಿದ್ದ ರೈ ಆಗ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದರು. ಗುಂಡು ಕಾರು ಬಾಗಿಲನ್ನು ಸೀಳಿ ನೇರವಾಗಿ ಚಾಲಕನ ಬೆನ್ನ ಹಿಂದೆ ಹಾಯ್ದು ಡ್ರೈವರ್‌ ಸೀಟ್‌ನಲ್ಲಿ ಹೊಕ್ಕಿದೆ. ಈ ವೇಳೆ ಚಾಲಕನ ಬೆನ್ನಿಗೆ ಹಾಗೂ ರಿಕ್ಕಿ ರೈ ಮುಖಕ್ಕೆ, ಮೂಗಿಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕುರಿತು ಬಿಡದಿ ಠಾಣೆಯಲ್ಲಿ ರಿಕ್ಕಿ ರೈ ಕಾರು ಚಾಲಕ ಬಸವರಾಜ್ ಅವರು ಮೂವರ ವಿರುದ್ಧ ದೂರು ನೀಡಿದ್ದರು. ಇದರ ಆಧಾರದ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

 

- Advertisement -

Latest Posts

Don't Miss