ಬೆಂಗಳೂರು: ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸುಮಾರು 85 ಕೋಟಿ ರೂ.ನಷ್ಟು ಹಣವನ್ನು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರ ಪ್ರಭಾವದಿಂದ ಇತರೆ ಕಾಮಗಾರಿಗಳಿಗೆ ವರ್ಗಾವಣೆ ಮಾಡಲಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದೆ. ಅಲ್ಲದೆ ಕರ್ನಾಟಕ ಮುಕ್ತ ವಿವಿ ವತಿಯಿಂದ ಮಾಡಲಾದ ವಿವಿದ ಸಹಕಾರ ಸಂಸ್ಥೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಇದೆಲ್ಲದರ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಅವರು ಪಕ್ಷದ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯವು 1992ರ ಕಾಯಿದೆ ಅಡಿಯಲ್ಲಿ ರಚನೆಯಾಗಿದ್ದು, ಕಲಂ 4ರ ಅಡಿಯಲ್ಲಿ ತನ್ನ ಧೈಯೋದ್ದೇಶಗಳ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಈ ವಿಶ್ವ ವಿದ್ಯಾಲಯಕ್ಕೆ ಮಾನ್ಯ ರಾಜ್ಯಪಾಲರು ಕುಲಾಧಿಪತಿಗಳಾಗಿದ್ದು, ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿ ಡಾ|| ಅಶ್ವಥ್ ನಾರಾಯಣ್‌ರವರು ಸಮ ಕುಲಾಧಿಪತಿಗಳಾಗಿರುತ್ತಾರೆ. ಡಾ|| ಎಸ್.ವಿದ್ಯಾಶಂಕರ್‌ರವರು ಕುಲಪತಿಗಳಾಗಿರುತ್ತಾರೆ.
ಯಾವುದೇ ವಿಶ್ವವಿದ್ಯಾಲಯ ರಾಜ್ಯ ಸರ್ಕಾರದ ರೀತಿಯಲ್ಲಿ ಅನುದಾನಗಳನ್ನು ಹಂಚಿಕೆ ಮಾಡಲು ಸಾದ್ಯವಿಲ್ಲ. ಸಚಿವರ ಪ್ರಭಾವದ ಕಾರಣಕ್ಕೆ ಈ ವಿಶ್ವವಿದ್ಯಾಲಯದ ಕುಲಪತಿಗಳು ನಿಯಮ ಮೀರಿ ಹಣ ದುರ್ಬಳಕೆ ಮಾಡಿದ್ದು, ಇದರ ಸಂಪೂರ್ಣ ತನಿಖೆ ಆಗಬೇಕಾಗಿರುತ್ತದೆ. ಭೋದಕ ಮತ್ತು ಭೋದಕೇತರ ಸಿಬ್ಬಂದಿಗೆ ಮಾಸಿಕ ಅಂದಾಜು 6 ಕೋಟಿ ರೂಪಾಯಿಗಳ ವೇತನ ಪಾವತಿ ಮಾಡಬೇಕಾಗಿದ್ದು, ವಿದ್ಯಾರ್ಥಿಗಳ ಮೂಲಕ ವಾರ್ಷಿಕ ಸುಮಾರು 15-16 ಕೋಟಿ ಶುಲ್ಕ ಸಂಗ್ರಹವಾಗುತ್ತದೆ. ವಿಶ್ವವಿದ್ಯಾಲಯಕ್ಕೆ ಯಾವುದೇ ಆದಾಯದ ಮೂಲಗಳು ಇಲ್ಲದಿದ್ದರೂ, ಶಿಕ್ಷಣ ಸಚಿವರ ಕಾರಣಕ್ಕಾಗಿ ವಿಶ್ವವಿದ್ಯಾಲಯದಲ್ಲಿ ಠೇವಣಿ ರೂಪದಲ್ಲಿರುವ ಹಣವನ್ನು ದುರ್ಬಳಕೆ ಮಾಡಿ ಅನುದಾನಗಳ ಮೂಲಕ ಹಂಚಲಾಗಿದೆ.
ಉನ್ನತ ಶಿಕ್ಷಣ ಸಚಿವರ ಪ್ರಭಾವದ ಕಾರಣಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು ಮುನ್ನೂರು ಮಂದಿ ಭೋದಕ ಮತ್ತು ಭೋದಕೇತರ ಸಿಬ್ಬಂದಿಯನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಪ್ರತೀ ನೇಮಕಾತಿಯಲ್ಲಿ ಉನ್ನತ ಶಿಕ್ಷಣ ಸಚಿವರ ಹೆಸರನ್ನು ಬಳಸಿಕೊಂಡು ಹಣ ಸಂಗ್ರಹ ಮಾಡಲಾಗಿದೆ. ಇಲ್ಲಿನ ಅಕ್ರಮ ತನಿಖೆಗೆ ರಚನೆಯಾಗಿದ್ದ ಜಸ್ಟೀಸ್ ಭಕ್ತವತ್ಸಲ ಸಮಿತಿಯ ವರದಿಯನ್ನು ಕಡೆಗಣಿಸಿ, ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ, ಪದೋನ್ನತಿ ಮಾಡಲಾಗಿದೆ. ವಿಶ್ವವಿದ್ಯಾಲಯದ 01-04-2006ರ ನಂತರ ನೇಮಕವಾದ ಸಿಬ್ಬಂದಿಗೆ ಎನ್‌ಪಿಎಸ್ ಪಿಂಚಣಿ ಯೋಜನೆ ಜಾರಿಗೊಳಿಸಲು ಸಂಪನ್ಮೂಲದ ಕೊರತೆಯಿದೆ ಎಂದು ಹೇಳುವ ವಿಶ್ವವಿದ್ಯಾಲಯ ಅಕ್ರಮದ ಮೂಲಕ ಹಲವಾರು ಕೋಟಿ ರೂಪಾಯಿಗಳನ್ನು ಇತರೆ ಕಾಮಗಾರಿಗೆ ನೀಡಿದೆ.
ಸಚಿವ ಅಶ್ವತ್ಥ್ ನಾರಾಯಣ ಅವರು ತಮ್ಮ ಅಧಿಕಾರ ದುರುಪಯೋಗ ಪಡೆಸಿಕೊಂಡು ಉನ್ನತ ಶಿಕ್ಷಣ ಸಚಿವರು 31-08-2020ರಲ್ಲಿ ಶಿಫಾರಸ್ಸು ಮಾಡುವುದರ ಮೂಲಕ ಮುಕ್ತ ವಿಶ್ವ ವಿದ್ಯಾಲಯದ ಹಣವನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ನೀಡಿರುತ್ತಾರೆ. ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಉಪಕುಲಪತಿಗಳು 17-08-2021ರಲ್ಲಿ ಸುಮಾರು 85 ಕೋಟಿ ರೂಪಾಯಿಗಳ ವಿಶ್ವ ವಿದ್ಯಾಲಯದ ಹಣವನ್ನು ಇತರೆ ಕಾಮಗಾರಿಗಳಿಗೆ ಬಳಸಲು ಸಭೆಯ ಮೂಲಕ ಅನುಮತಿ ನೀಡಿದ್ದು, ಪರಿಷ್ಕೃತ ವೆಚ್ಚದಲ್ಲಿ ಇದು 94ಕೋಟಿ ರೂಪಾಯಿ ಆಗಿರುತ್ತದೆ. ಶಿಕ್ಷಣ ಸಚಿವರ ಪ್ರಭಾವದ ಕಾರಣಕ್ಕಾಗಿ 25ಕೋಟಿ ರೂಪಾಯಿ ಸಂಸ್ಕೃತ ವಿಶ್ವವಿದ್ಯಾಲಯದ ಕಟ್ಟಡಕ್ಕೆ ನೀಡಿರುತ್ತಾರೆ.
ಇನ್ನು ಸಹಕಾರ ಸಂಘಗಳ ನಿಯಮ 17ರ ಅಡಿಯಲ್ಲಿ ನೌಕರರ ನೇಮಕಾತಿಗೆ ಪೂರಕವಾಗಿ ನಡೆಸುವ ಪರೀಕ್ಷೆಯ ಮೇಲ್ವಿಚಾರಣೆಯನ್ನು ಪಡೆದುಕೊಂಡಿರುವ ಮುಕ್ತ ವಿಶ್ವವಿದ್ಯಾಲಯ ರಾಜ್ಯದ ಹಾಲು ಉತ್ಪಾದಕರ ಸಹಕಾರ ಸಂಘಗಳು, ರಾಜ್ಯ ಎಣ್ಣೆ ಬೀಜಕಾಳು ಸಹಕಾರ ಮಹಾಮಂಡಲ ಹಾಗೂ ಇನ್ನಿತರ ಸಹಕಾರಿ ಬ್ಯಾಂಕುಗಳು ಈ ವಿಶ್ವವಿದ್ಯಾಲಯದ ಮೂಲಕ ಪರೀಕ್ಷೆಗಳನ್ನು ನಡೆಸಿದ್ದು, ಎಲ್ಲಾ ಪರೀಕ್ಷಾ ವ್ಯವಸ್ಥೆಯಲ್ಲಿ ಆಕ್ರಮ ನಡೆದಿರುತ್ತದೆ.
22-01-2022ರಲ್ಲಿ ಲೋಕಸಭಾ ಸದಸ್ಯರಾದ ಶ್ರೀ ಡಿ.ಕೆ.ಸುರೇಶ್‌ರವರು ಬಮೂಲ್ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಆಕ್ರಮ ತನಿಖೆಗೆ ಸರ್ಕಾರಕ್ಕೆ ಪತ್ರ ಬರೆದಿರುತ್ತಾರೆ.
ವಿಶ್ವವಿದ್ಯಾಲಯದಲ್ಲಿ ಸಹಕಾರ ಸಂಸ್ಥೆಗಳ ಪರೀಕ್ಷೆಗಳನ್ನು ನಡೆಸಲು ಲಕ್ಷಾಂತರ ರೂಪಾಯಿಗಳನ್ನು ಪಡೆಯಲಾಗಿದ್ದು, ನಿಯಮಗಳಿಗೆ ವಿರುದ್ಧವಾಗಿ ವಿಶ್ವವಿದ್ಯಾಲಯದ ಸಹಸಂಯೋಜಕರ ಹೆಸರಿನಲ್ಲಿ ಖಾತೆ ತೆಗೆದು ಈ ಹಣವನ್ನು ಬಳಸಲಾಗಿದೆ. ಲಕ್ಷಾಂತರ ರೂಪಾಯಿಗಳನ್ನು ನಗದು ರೂಪದಲ್ಲಿ ಈ ಖಾತೆಯಿಂದ ಪಡೆಯುವ ಮೂಲಕ ಹಣ ಅಕ್ರಮ ವರ್ಗಾವಣೆ (ಮನಿಲಾಂಡ್ರಿಂಗ್) ನಡೆಸಲಾಗಿದ್ದು, ತಕ್ಷಣ ತನಿಖೆಯಾಗಬೇಕಾಗಿದೆ.
ಇನ್ನು ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜ್ ನೌಕರರಾಗಿದ್ದ ಡಾ|| ವಿದ್ಯಾಶಂಕರ್‌ರವರನ್ನು ಶಿಕ್ಷಣ ಸಚಿವರ ಪ್ರಭಾವದ ಕಾರಣಕ್ಕೆ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳನ್ನಾಗಿ ನೇಮಿಸಿ, ಇವರ ಮೇಲೆ ಅನೇಕ ಅಕ್ರಮದ ದೂರುಗಳು ಬಂದರೂ 06-04-2022ರಲ್ಲಿ ಇವರನ್ನು ಒಂದು ವರ್ಷದ ಅವಧಿಗೆ ಮುಂದುವರೆಸಲಾಗಿದೆ. ಇವರ ಮುಂದುವರಿಕೆಯ ಅಕ್ರಮದಲ್ಲಿ ಸಚಿವರು ಮತ್ತು ರಾಜ್ಯಪಾಲರ ಕಛೇರಿಯೂ ಭಾಗಿಯಾಗಿರುತ್ತಾರೆ.
21-02-2022ರಲ್ಲಿ ನವದೆಹಲಿಯ ಯುಜಿಸಿ ಸಂಸ್ಥೆಯು ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಈ ವಿಶ್ವವಿದ್ಯಾಲಯದ ಕುಲಪತಿಗಳ ಮೇಲೆ ಬಂದಿರುವ ಅಕ್ರಮಗಳ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿರುತ್ತದೆ. ಅದೇ ರೀತಿ ಸಹಕಾರ ಸಂಸ್ಥೆಗಳ ಪರೀಕ್ಷಾ ಅಕ್ರಮಗಳ ಸಂಬಂಧ ತನಿಖೆ ಮಾಡಲು ಸಹಕಾರ ಸಚಿವರ ಸೂಚನೆಯ ಮೇರೆಗೆ ಸಹಕಾರ ಇಲಾಖೆಯು ನಿಭಂದಕರಿಗೆ ಪತ್ರ ಬರೆದಿರುತ್ತದೆ.
ಇಷ್ಟೆಲ್ಲಾ ಗುರುತರ ಆರೋಪಗಳ ಮಧ್ಯೆ ರಾಜ್ಯಪಾಲರು ಇವರ ಅವಧಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಈಗಿನ ಕುಲಪತಿಗಳು ಉನ್ನತ ಶಿಕ್ಷಣ ಸಚಿವರಿಗೆ ಆಪ್ತರಾಗಿದ್ದು, ರಾಜ್ಯದ ವಿಶ್ವವಿದ್ಯಾಲಯಗಳ ಮತ್ತು ಉನ್ನತ ಶಿಕ್ಷಣ ಸಚಿವರ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಇದೇ ಸಂಪರ್ಕ ಮತ್ತು ಪ್ರಭಾವವನ್ನು ಬಳಸಿಕೊಂಡು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾಗಲು ಪ್ರಯತ್ನಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿತ ಕುಲಪತಿಗಳ ಮೇಲೆ ನ್ಯಾಯಾಂಗ ತನಿಖೆ ಒಳಪಡಿಸಿ, ವಿಶ್ವವಿದ್ಯಾಲಯ ಮತ್ತು ಇದರ ಹಣವನ್ನು ಸಂರಕ್ಷಿಸಬೇಕಾಗಿ ಒತ್ತಾಯಿಸುತ್ತೇನೆ. ಕಳಂಕಿತರನ್ನು ತೊಲಗಿಸಿ, ವಿಶ್ವವಿದ್ಯಾಲಯಗಳನ್ನು ಸಂರಕ್ಷಿಸಬೇಕು’