ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿರುವಂತ ಮಾಜಿ ಪರಿಷತ್ ಸದಸ್ಯ ಶ್ರೀನಾಥ್ ಅವರು, ಇಂದು ಕಾಂಗ್ರೆಸ್ ಪಕ್ಷವನ್ನು ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸೇರ್ಪಡೆಗೊಂಡಿದ್ದಾರೆ.
ಈ ಶ್ರೀನಾಥ್ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇಂದು ಕೊಪ್ಪಳ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷವಾದ ದಿನ. ಗಾಂಧಿ ಕುಟುಂಬದ ಜತೆ ಎಚ್.ಜಿ. ರಾಮುಲು ಅವರ ಕುಟುಂಬದ ಅತ್ಯುತ್ತಮ ಬಾಂಧವ್ಯ ಹೊಂದಿದ್ದು, ಇಂದಿರಾ ಗಾಂಧಿ ಅವರು ಅನೇಕ ಬಾರಿ ಇವರ ಮನೆಗೆ ಭೇಟಿ ನೀಡಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ಕಾರಣಾಂತರಗಳಿಂದ ಅವರು ಪಕ್ಷ ತೊರೆದಿದ್ದರು ಎಂದರು.
ಕಳೆದ ಏಳೆಂಟು ತಿಂಗಳ ಹಿಂದೆ ನಾನು ಶ್ರೀನಾಥ್ ಅವರ ತಂದೆ ರಾಮುಲು ಅವರನ್ನು ಭೇಟಿ ಮಾಡಿ ಹಳೇ ಕಹಿ ಘಟನೆಗಳನ್ನು ಮರೆತು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರಬೇಕು ಎಂದು ಕೇಳಿದ್ದೆ. ಎಸ್.ಎಂ. ಕೃಷ್ಣ ಅವರು ಸಿಎಂ ಆಗುವ ಮುನ್ನ ಸೋನಿಯಾ ಗಾಂಧಿ ಅವರು ನನಗೆ ಮೂರು ಕುಟುಂಬಗಳನ್ನು ಭೇಟಿ ಮಾಡಲು ಸೂಚಿಸಿದ್ದರು. ಅವುಗಳಲ್ಲಿ ಒಂದು ಎಚ್.ಜಿ ರಾಮುಲು ಅವರ ಕುಟುಂಬ ಎಂದು ಹೇಳಿದರು.
ನಾನು ಮತ್ತು ಕೃಷ್ಣ ಅವರು ಇವರ ಮನೆಗೆ ಭೇಟಿ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದೆವು. ಇವರ ಕುಟುಂಬದ ಜತೆಗೆ ಉಳಿದ ಎರಡು ಕುಟುಂಬಗಳೆಂದರೆ ಮುರುಘಾ ಗೋವಿಂದ ರೆಡ್ಡಿ ಹಾಗೂ ಸಚ್ಚಿದಾನಂದ ಸ್ವಾಮಿ ಅವರ ಕುಟುಂಬ. ನಾವು ಇವರ ಮನೆಗೂ ಹೋಗಿದ್ದೆವು. ಗಾಂಧಿ ಕುಟುಂಬಕ್ಕೂ ಈ ಕುಟುಂಬಗಳಿಗೂ ಅತ್ಯುತ್ತಮ ಸಂಬಂಧ ಇತ್ತು ಎಂದು ತಿಳಿಸಿದರು.
ಇಂದು ಶ್ರೀನಾಥ್ ಅವರು ಯಾವ ಷರತ್ತೂ ಇಲ್ಲದೇ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂಬ ಒಂದು ಷರತ್ತನ್ನು ಮಾತ್ರ ನಾವು ಹಾಕಿದ್ದೇವೆ. ಮಲ್ಲಿಕಾರ್ಜುನ ನಾಗಪ್ಪ ಅವರು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಶ್ರೀನಾಥ್ ಅವರು ಪರಿಷತ್ ಸದಸ್ಯರಾಗಬೇಕು ಎಂದು ಕೇಳಿರಲಿಲ್ಲ. ಆದರೂ ಅವರ ಮನೆ ಬಾಗಿಲಿಗೆ ಅಧಿಕಾರ ಹುಡುಕಿಕೊಂಡು ಹೋಗಿತ್ತು ಎಂದು ಹೇಳಿದರು.
ಶ್ರೀನಾಥ್ ಹಾಗೂ ಅವರ ಬೆಂಬಲಿಗರ ಸೇರ್ಪಡೆಗೆ ಹೈಕಮಾಂಡ್ ಕೂಡ ಒಪ್ಪಿದೆ. ಅಲ್ಲಂ ವೀರಭದ್ರಪ್ಪ ಅವರ ಸಮಿತಿ ಕೂಡ ಎಲ್ಲರ ಜತೆ ಮಾತನಾಡಿದೆ. ನಾನು ಜಿಲ್ಲಾಧ್ಯಕ್ಷರು, ಇಕ್ಬಾಲ್ ಅನ್ಸಾರಿ ಅವರ ಜತೆ ಮಾತುಕತೆ ನಡೆಸಿ, ಎಲ್ಲರ ಒಮ್ಮತದಿಂದ ಶ್ರೀನಾಥ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ನಮ್ಮ ಸಮೀಕ್ಷೆ ಪ್ರಕಾರ ಈ ಬಾರಿ ಕೊಪ್ಪಳ ಜಿಲ್ಲೆಯ ಐದಕ್ಕೆ ಐದು ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲಲಿದೆ. ಇದನ್ನು ನಿಜ ಮಾಡಲು ನೀವೆಲ್ಲರೂ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ, ಸೋನಿಯಾ ಗಾಂಧಿ ಅವರ ಪರವಾಗಿ, ಸಿದ್ದರಾಮಯ್ಯ ಹಾಗೂ ಬಿ. ಕೆ. ಹರಿಪ್ರಸಾದ್ ಅವರು, ಕಾರ್ಯಾಧ್ಯಕ್ಷರು, ಜಿಲ್ಲಾ ನಾಯಕರು, ಇಕ್ಬಾಲ್ ಅನ್ಸಾರಿ ಅವರ ಸಮ್ಮುಖದಲ್ಲಿ ಶ್ರೀನಾಥ್ ಹಾಗೂ ಅವರ ಕುಟುಂಬ ಹಾಗೂ ಬೆಂಬಲಿಗರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಕೊಪ್ಪಳದಲ್ಲಿ ದೊಡ್ಡ ಸಮಾವೇಶ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಆಲೋಚನೆ ಇತ್ತು. ಸದ್ಯಕ್ಕೆ ಪಕ್ಷ ಸೇರ್ಪಡೆ ಆಗಲಿ ಎಂದು ಕಾಂಗ್ರೆಸ್ ಕಚೇರಿಯಲ್ಲಿ ಮಾಡಲಾಗುತ್ತಿದೆ. ಈ ಸೇರ್ಪಡೆ ವಿಚಾರವಾಗಿ ಎಲ್ಲೂ ಭಿನ್ನಾಭಿಪ್ರಾಯ ಇಲ್ಲ ಎಂದರು.




