ಫ್ರಾನ್ಸ್ನಲ್ಲಿ ಆಡಳಿತ ಸರ್ಕಾರದ ವಿರುದ್ಧ ಭಾರಿ ಹಿಂಸಾಚಾರ ಹಾಗೂ ಪ್ರತಿಭಟನೆಗಳು ಭುಗಿಲೆದ್ದಿವೆ. ರಾಜಧಾನಿ ಪ್ಯಾರಿಸ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜನರು ರಸ್ತೆಗಿಳಿದು ಆಕ್ರೋಶ ಹೊರಹಾಕುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿಗಳನ್ನು ಬಳಸುವಂತಾಗಿದೆ. ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಸರ್ಕಾರದ ಆಡಳಿತ ನೀತಿಗಳು, ಶಾಲಾ ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಮಿತಿಮೀರಿದ ಜೀವನ ವೆಚ್ಚವೇ ಈ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.
ಹೌದು, ಈ ಬೃಹತ್ ಪ್ರತಿಭಟನೆಯ ಕಿಡಿ ಹೊತ್ತಿಕೊಂಡಿದ್ದು ಶಾಲೆಗಳಿಂದ! ಸೆಪ್ಟೆಂಬರ್ನಲ್ಲಿ ಪ್ಯಾರಿಸ್ನ ಉಪನಗರದ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕರ ಕೊರತೆ ಹಾಗೂ ಮೂಲಸೌಕರ್ಯಗಳ ವೈಫಲ್ಯವನ್ನು ವಿರೋಧಿಸಿ ವಿದ್ಯಾರ್ಥಿಗಳು ಮುಷ್ಕರ ಆರಂಭಿಸಿದ್ದರು. ಸೋರುವ ಛಾವಣಿಗಳು, ಶಿಥಿಲಗೊಂಡ ಕಟ್ಟಡಗಳು ಹಾಗೂ ಕನಿಷ್ಠ ಸೌಲಭ್ಯಗಳಿಲ್ಲದ ಕೊಠಡಿಗಳಲ್ಲಿ ಕಳೆಯಬೇಕಾದ ಪರಿಸ್ಥಿತಿಯನ್ನು ವಿರೋಧಿಸಿ ವಿದ್ಯಾರ್ಥಿಗಳು ಬೀದಿಗಿಳಿದರು. ಬಡ ಹಾಗೂ ಹಿಂದುಳಿದ ವರ್ಗಗಳ ಶಾಲೆಗಳನ್ನು ಸರ್ಕಾರ ಕಡೆಗಣಿಸಿದೆ ಎಂಬ ಆರೋಪ ದೇಶವ್ಯಾಪಿ ಚಳವಳಿಗೆ ನಾಂದಿ ಹಾಡಿತು.
ಶಾಲೆಗಳ ಸಮಸ್ಯೆಗೆ ಸೀಮಿತವಾಗಿದ್ದ ಈ ಆಕ್ರೋಶ, ಕೆಲವೇ ದಿನಗಳಲ್ಲಿ ದೇಶಾದ್ಯಂತ ಜನಸಾಮಾನ್ಯರನ್ನು ಕಾಡುತ್ತಿರುವ ಹಣದುಬ್ಬರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧದ ಬೃಹತ್ ಹೋರಾಟವಾಗಿ ರೂಪಾಂತರಗೊಂಡಿತು. ಕಾರ್ಮಿಕ ಸಂಘಟನೆಗಳು ಈ ಪ್ರತಿಭಟನೆಗೆ ಕೈಜೋಡಿಸಿದ್ದು, ಬೆಲೆ ಇಳಿಕೆ ಹಾಗೂ ವೇತನ ಹೆಚ್ಚಳಕ್ಕೆ ಆಗ್ರಹಿಸಿವೆ.
ಇನ್ನು ಪ್ರತಿಭಟನೆಗಳನ್ನು ಹತ್ತಿಕ್ಕಲು ಭದ್ರತಾ ಪಡೆಗಳು ನಡೆಸಿದ ಲಾಠಿಪ್ರಹಾರ ಹಾಗೂ ಅಶ್ರುವಾಯು ಪ್ರಯೋಗದಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಪೊಲೀಸರ ಕಾರ್ಯಾಚರಣೆಯಲ್ಲಿ ಹಲವು ಅಪ್ರಾಪ್ತ ವಿದ್ಯಾರ್ಥಿಗಳು ಗಾಯಗೊಂಡಿರುವುದು ಪೋಷಕರನ್ನು ಕೆರಳಿಸಿದ್ದು, ಸರ್ಕಾರಿ ಕಚೇರಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚುವ ಮಟ್ಟಕ್ಕೆ ಆಕ್ರೋಶ ಭುಗಿಲೆದ್ದಿದೆ.
ದೇಶಾದ್ಯಂತ ಉದ್ಭವಿಸಿರುವ ಈ ಅರಾಜಕತೆ ಫ್ರೆಂಚ್ ಸರ್ಕಾರಕ್ಕೆ ಕಠಿಣ ಸವಾಲಾಗಿ ಪರಿಣಮಿಸಿದೆ. ಶೈಕ್ಷಣಿಕ ವ್ಯವಸ್ಥೆ ಹಾಗೂ ಆರ್ಥಿಕ ಬಿಕ್ಕಟ್ಟನ್ನು ತಕ್ಷಣವೇ ಬಗಹರಿಸದಿದ್ದರೆ, ಈ ಪ್ರತಿಭಟನೆ ಯುರೋಪಿನ ಇತರ ಭಾಗಗಳಿಗೂ ಹರಡುವ ಆತಂಕ ವ್ಯಕ್ತವಾಗಿದೆ.




