ಸಿಎಂ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಖ್ಯಾತಿ, ದೇಶದ ಉದ್ದಗಲಕ್ಕೂ ಮುಟ್ಟಿದೆ. ಬೇರೆ ರಾಜ್ಯಗಳು ಕೂಡ, ಗ್ಯಾರಂಟಿಗಳನ್ನು ತಮ್ಮಲ್ಲೂ ಅಳವಡಿಸಿಕೊಳ್ತಿವೆ. ಕರ್ನಾಟಕದ ಬಳಿಕ ತೆಲಂಗಾಣ ರಾಜ್ಯದಲ್ಲೂ ಗ್ಯಾರಂಟಿ ಕೊಟ್ಟು, ಕಾಂಗ್ರೆಸ್ ಸಕ್ಸಸ್ ಆಗಿದೆ.
ಕರ್ನಾಟಕದಲ್ಲಿ ಬಸ್ ಟಿಕೆಟ್ ದರ ಏರಿಕೆ ಬಿಸಿ ನಡುವೆ, ಶಕ್ತಿ ಯೋಜನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಆಂಧ್ರಪ್ರದೇಶದಿಂದಲೂ ಈಗ ಇದನ್ನೇ ಫಾಲೋ ಮಾಡಲಾಗುತ್ತಿದೆ. ತಮ್ಮ ರಾಜ್ಯದಲ್ಲೂ ಕರ್ನಾಟಕದ ಮಾದರಿಯಲ್ಲಿ, ಶಕ್ತಿ ಯೋಜನೆ ಜಾರಿಗೆ ತರಲು ಮುಂದಾಗಿದೆ. ಈ ನಿಟ್ಟಿನಲ್ಲಿ ಆಂಧ್ರ ಸಚಿವರ ನಿಯೋಗ, ಕರ್ನಾಟಕದಲ್ಲಿ ಅಧ್ಯಯನ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಸದ್ಯ ಆಂಧ್ರಪ್ರದೇಶದ ಮಹಿಳೆಯರು ಬಹು ನಿರೀಕ್ಷಿಸಿದ್ದ ಉಚಿತ ಬಸ್ ಸೇವೆಗೆ ಇದೀಗ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶುಕ್ರವಾರ ‘ಸ್ತ್ರೀ ಶಕ್ತಿ’ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ಗುಂಟೂರು ಜಿಲ್ಲೆಯ ತಾಡಪಳ್ಳಿ ಮಂಡಲದಿಂದ ಉಂಡವಲ್ಲಿ ಗುಹೆಗಳ ಬಳಿ ಆರಂಭವಾದ ಈ ಕಾರ್ಯಕ್ರಮದಲ್ಲಿ, ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಸಚಿವ ನಾರಾ ಲೋಕೇಶ್ ಅವರು ಬಸ್‌ನಲ್ಲಿ ಮಹಿಳೆಯರೊಂದಿಗೆ ಪ್ರಯಾಣಿಸಿದರು.
ವಿಜಯವಾಡದ ಪಂಡಿತ ನೆಹರು ಬಸ್ ನಿಲ್ದಾಣದವರೆಗೆ ಈ ಸಮಾರಂಭದ ಪ್ರಮುಖ ಭಾಗವಾಗಿ ಬಸ್ ಯಾನ ನಡೆಸಲಾಯಿತು. ಸಿಎಂ ಚಂದ್ರಬಾಬು ನಾಯ್ಡು ಧ್ವಜ ಪ್ರದರ್ಶಿಸುವ ಮೂಲಕ ಯೋಜನೆಗೆ ಅಧಿಕೃತ ಚಾಲನೆ ನೀಡಿದರು. ಉಂಡವಲ್ಲಿ ಸೆಂಟರ್, ತಾಡಪಳ್ಳಿ ಪ್ಯಾಲೆಸ್, ತಾಡೇಪಳ್ಳಿ ಸೆಂಟರ್ ಹಾಗೂ ಕನಕದುರ್ಗ ವಾದ್ರಿಯ ಮೂಲಕ ಬಸ್ ಸಂಚರಿಸಲಾಯಿತು.
ಮಹಿಳೆಯರು, ಬಾಲಕಿಯರು, ವಿದ್ಯಾರ್ಥಿನಿಯರು ಹಾಗೂ ತೃತೀಯಲಿಂಗ ಸಮುದಾಯದವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಬಸ್‌ನಲ್ಲಿ ಪ್ರಯಾಣಿಸಲು, ಪ್ರಯಾಣಿಕರು ಸರ್ಕಾರದ ಮಾನ್ಯ ದಾಖಲೆಗಳಲ್ಲಿ ಒಂದಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ತೋರಿಸಿ ಶೂನ್ಯ ಶುಲ್ಕದ ಟಿಕೆಟ್ ಪಡೆಯಬೇಕಾಗುತ್ತದೆ.
ಈ ಯೋಜನೆಯ ಲಾಭವನ್ನು ಸುಮಾರು 2.62 ಕೋಟಿ ಮಹಿಳೆಯರು ಪಡೆದುಕೊಳ್ಳಲಿದ್ದಾರೆ. ಇದರಿಂದಾಗಿ ಆಂಧ್ರಪ್ರದೇಶ ಸರ್ಕಾರಕ್ಕೆ ವಾರ್ಷಿಕ ₹1,942 ಕೋಟಿ ಹೆಚ್ಚುವರಿ ವೆಚ್ಚ ಸಂಭವಿಸಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.