ಕೇವಲ ₹10,500 ವೆಚ್ಚದಲ್ಲಿ 30 ವರ್ಷ ಅಡುಗೆ ಅನಿಲ ಫ್ರೀ!

ರಾಜ್ಯಾದ್ಯಂತ LPG ಸಿಲಿಂಡರ್ ಕೊರತೆ ಜನರಿಗೆ ತೀವ್ರ ತೊಂದರೆ ಉಂಟುಮಾಡುತ್ತಿರುವ ಸಂದರ್ಭದಲ್ಲಿ, ರಾಯಚೂರಿನ ಪೊಲೀಸ್ ಕಾನ್‌ಸ್ಟೇಬಲ್ ವಿನೋದ್ ಅವರು ಅಳವಡಿಸಿಕೊಂಡಿರುವ ಬಯೋಗ್ಯಾಸ್ ವ್ಯವಸ್ಥೆ ಇದೀಗ ಗಮನ ಸೆಳೆಯುತ್ತಿದೆ.

ಇತ್ತೀಚೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉಂಟಾದ ಉದ್ವಿಗ್ನತೆ, ವಿಶೇಷವಾಗಿ ಇಸ್ರೇಲ್–ಇರಾನ್ ನಡುವಿನ ಸಂಘರ್ಷದ ಪರಿಣಾಮವಾಗಿ LPG ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಹಲವು ಪ್ರದೇಶಗಳಲ್ಲಿ ಜನರು ಕಿಲೋಮೀಟರ್‌ಗಳಷ್ಟು ದೂರ ಸರತಿಯಲ್ಲಿ ನಿಂತು ಸಿಲಿಂಡರ್ ಪಡೆಯಲು ಪರದಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ, ವಿನೋದ್ ಅವರು ಕಳೆದ ಎರಡು ವರ್ಷಗಳಿಂದ ತಮ್ಮ ಮನೆಯಲ್ಲಿ ಬಯೋಗ್ಯಾಸ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಬಳಸುತ್ತಿದ್ದಾರೆ. ಮನೆಯಲ್ಲೇ ಉತ್ಪತ್ತಿಯಾಗುವ ಹಣ್ಣು, ತರಕಾರಿ ಹಾಗೂ ಇತರೆ ಜೈವಿಕ ತ್ಯಾಜ್ಯಗಳನ್ನು ಬಳಸಿ ಅನಿಲವನ್ನು ಉತ್ಪಾದಿಸಲಾಗುತ್ತಿದ್ದು, ದಿನನಿತ್ಯದ ಅಡುಗೆ ಕಾರ್ಯಕ್ಕೆ ಯಾವುದೇ ಅಡೆತಡೆ ಇಲ್ಲದೆ ಬಳಸಲಾಗುತ್ತಿದೆ.

ಸುಮಾರು 10,500 ರೂ. ವೆಚ್ಚದಲ್ಲಿ 1000 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಟ್ಯಾಂಕ್ ಉಪಯೋಗಿಸಿ ಈ ಘಟಕವನ್ನು ಸ್ಥಾಪಿಸಲಾಗಿದೆ. ಈ ವ್ಯವಸ್ಥೆಯು LPG ಸಿಲಿಂಡರ್‌ಗೆ ಸಮಾನವಾದ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಬಳಕೆದಾರರಿಗೆ ಸುಲಭ ಮತ್ತು ಸುರಕ್ಷಿತವಾಗಿದೆ.

ಈ ಬಯೋಗ್ಯಾಸ್ ಪದ್ಧತಿಯು ಕನಿಷ್ಠ 25 ರಿಂದ 30 ವರ್ಷಗಳವರೆಗೆ ಬಾಳಿಕೆ ಬರುವುದಾಗಿ ವಿನೋದ್ ತಿಳಿಸಿದ್ದಾರೆ. ಜೊತೆಗೆ, ಇದು ಪರಿಸರ ಸ್ನೇಹಿ ಹಾಗೂ ಆರ್ಥಿಕವಾಗಿ ಲಾಭದಾಯಕ ಪರ್ಯಾಯವಾಗಿರುವುದರಿಂದ ಜನರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದೆ.

ವಿನೋದ್ ಅವರ ಈ ಮಾದರಿಯನ್ನು ವೀಕ್ಷಿಸಲು ಮತ್ತು ಮಾಹಿತಿ ಪಡೆಯಲು ಈಗಾಗಲೇ ಅನೇಕರು ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. LPG ಸಮಸ್ಯೆಗೆ ದೀರ್ಘಕಾಲೀನ ಪರಿಹಾರವಾಗಿ ಬಯೋಗ್ಯಾಸ್ ವ್ಯವಸ್ಥೆ ಒಂದು ಉತ್ತಮ ಆಯ್ಕೆಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author