ದಾವಣಗೆರೆಯಲ್ಲಿ ದೋಸ್ತಿ ವರ್ಸಸ್ ಕುಸ್ತಿ; BJP ಮಾಸ್ಟರ್ ಪ್ಲಾನ್! ‘ಕೈ’ ಗೆ ನಡುಕ?

ಕರ್ನಾಟಕ ರಾಜಕೀಯದಲ್ಲಿ ಕುತೂಹಲ ಮೂಡಿಸಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಏಪ್ರಿಲ್ 9ರಂದು ನಡೆಯಲಿರುವ ಈ ಚುನಾವಣೆಗೆ ಬಿಜೆಪಿ ಹಳೆಯ ಅನುಭವ ಮತ್ತು ಹೊಸ ಮುಖಗಳಿಗೆ ಅವಕಾಶ ನೀಡಿದೆ.

ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ವೀರಣ್ಣ ಚರಂತಿಮಠ್ ಅವರಿಗೆ ಟಿಕೆಟ್ ನೀಡಿದೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕನಾಗಿರುವ ಚರಂತಿಮಠ್ ಅವರನ್ನು ಮತ್ತೆ ಕಣಕ್ಕಿಳಿಸುವ ಮೂಲಕ ಬಿಜೆಪಿ ಸಮುದಾಯ ಆಧಾರಿತ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ. ಮಾಜಿ ಶಾಸಕ H.Y. ಮೇಟಿ ಅವರ ನಿಧನದ ಹಿನ್ನೆಲೆ ಉಪಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್ ಒಳಗೇ ಗೊಂದಲದ ನಡುವೆ ಬಿಜೆಪಿ ಮೊದಲ ಹೆಜ್ಜೆ ಇಟ್ಟಿದೆ.

ಇನ್ನೊಂದೆಡೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ವಾಲ್ಮೀಕಿ ಅಂದರೆ ಎಸ್‌ಟಿ ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನವೂ ಇದರಲ್ಲಿ ಗೋಚರಿಸುತ್ತದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಭಲವಾಗಿದ್ದರೂ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಪಕ್ಷಕ್ಕೆ ಅಭ್ಯರ್ಥಿ ಆಯ್ಕೆ ದೊಡ್ಡ ಸವಾಲಾಗಿದೆ. ಈ ಪರಿಸ್ಥಿತಿಯನ್ನು ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ಈಗಾಗಲೇ ಪ್ರಚಾರ ಆರಂಭಿಸುವ ಸೂಚನೆ ನೀಡಿದೆ. ಇದರಿಂದಾಗಿ ದಾವಣಗೆರೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆಯುವ ನಿರೀಕ್ಷೆ ಇದೆ. ಎಸ್‌ಟಿ ಮತಗಳು ನಿರ್ಣಾಯಕವಾಗಿರುವುದರಿಂದ ಬಿಜೆಪಿ ತನ್ನ ತಂತ್ರವನ್ನು ಸೂಕ್ಷ್ಮವಾಗಿ ರೂಪಿಸಿದೆ.

ಇದೇ ವೇಳೆ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದ ತಂಡ ಅಜಯಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರೂ, ಬಿಜೆಪಿ ಹೈಕಮಾಂಡ್ ಆ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಇದರಿಂದ ರೇಣುಕಾಚಾರ್ಯ ಬಣಕ್ಕೆ ಹಿನ್ನಡೆ ಉಂಟಾಗಿದೆ.

ಶ್ರೀನಿವಾಸ್ ದಾಸಕರಿಯಪ್ಪ ಅವರು ಮಾಜಿ ಸಂಸದ G.M. ಸಿದ್ದೇಶ್ವರ ಅವರ ಆಪ್ತರಾಗಿದ್ದು, ಅವರಿಗೆ ಟಿಕೆಟ್ ಸಿಕ್ಕಿರುವುದು ಸಿದ್ದೇಶ್ವರ ಬಣದ ಬಲವರ್ಧನೆ ಎಂದು ವಿಶ್ಲೇಷಿಸಲಾಗುತ್ತಿದೆ. ಅವರು ಪ್ರಸ್ತುತ ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನೊಂದೆಡೆ, ದಾವಣಗೆರೆ ಕಾಂಗ್ರೆಸ್ ಒಳಗೇ ಗೊಂದಲ ತಾರಕಕ್ಕೇರಿದೆ. ಸಚಿವ ಜಮೀರ್ ಅಹಮ್ಮದ್ ಖಾನ್ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದರೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಮಲ್ಲಿಕಾರ್ಜುನ ಹಠ ಹಿಡಿದಿರುವುದು ಪಕ್ಷದ ಒಳಜಗಳಕ್ಕೆ ಕಾರಣವಾಗಿದೆ.

About The Author