ಸಭೆ- ಪಂಚಾಯ್ತಿ ಮೂಲಕ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ನಿಷೇಧಿಸುವ ಮತ್ತು ಅಪರಾಧೀಕರಿಸುವ ಮಸೂದೆಯನ್ನು ರಾಜ್ಯ ಸರ್ಕಾರ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದೆ. ಈ ಮಸೂದೆಯು ನಿಯಮಗಳನ್ನು ಉಲ್ಲಂಘಿಸಿ ಸಾಮಾಜಿಕ ಬಹಿಷ್ಕಾರ ಹಾಕುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ, 3 ವರ್ಷದವರೆಗಿನ ಜೈಲು ಶಿಕ್ಷೆಗೆ ಗುರಿಪಡಿಸುವ ಅವಕಾಶ ಇದೆ.
ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ ಮಸೂದೆ-2025ನ್ನು ವಿಧಾನಸಭೆಯಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಮಂಡನೆ ಮಾಡಿದರು. ಇದರ ಪ್ರಕಾರ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ ಅಂಥವರಿಗೆ 1 ಲಕ್ಷ ರೂ. ದಂಡ ಹಾಗೂ 3 ವರ್ಷದವರೆಗಿನ ಜೈಲು ಶಿಕ್ಷೆಗೆ ಗುರಿಪಡಿಸುವ ಅವಕಾಶ ಇದೆ.
ಬಹಿಷ್ಕಾರಕ್ಕೆ ಒತ್ತಡ ಹೇರುವ ಮೂಲಕ ನಿರ್ಧಾರಕ್ಕೆ ಕಾರಣರಾದವರು, ಬಹಿಷ್ಕಾರದ ಪರವಾಗಿ ಮತ ಹಾಕಿದವರು ಅಥವಾ ಚರ್ಚೆಯಲ್ಲಿ ಪಾಲ್ಗೊಂಡವರನ್ನೂ ಅಪರಾಧಿಗಳೆಂದು ನಿರ್ಧರಿಸಲಾಗುತ್ತದೆ. ಈ ಕುರಿತು ಸಭೆ, ಜಮಾವಣೆ, ಸಮಾವೇಶ ನಡೆಸುವುದು ಅಕ್ರಮ ಎಂದು ಮಸೂದೆಯಲ್ಲಿ ಉಲ್ಲೇಖಿಸಿದೆ. ಬಹಿಷ್ಕಾರಕ್ಕೆ ಒಳಗಾಗುವವರು ಠಾಣೆ ಅಥವಾ ನ್ಯಾಯಾಧೀಶರಿಗೆ ನೇರವಾಗಿ ದೂರು ಸಲ್ಲಿಸಬಹುದು.
ಪ್ರಥಮ ದರ್ಜೆ ನ್ಯಾಯಾಧೀಶರಿಗೆ ವಿಚಾರಣೆಯ ಅಧಿಕಾರ ನೀಡಲಾಗಿದೆ. ನೇರವಾಗಿ ಸಲ್ಲಿಕೆಯಾದ ದೂರಿನ ತನಿಖೆ ನಡೆಸುವಂತೆ ನ್ಯಾಯಾಧೀಶರು ಆದೇಶಿಸಬಹುದು. ಪೀಡಿತರಿಗೆ ಸಹಾಯ ಒದಗಿಸಲು ಸೂಚಿಸಬಹುದು. ದಂಡದ ಮೊತ್ತವನ್ನು ಪೀಡಿತರಿಗೆ ಪರಿಹಾರವಾಗಿ ನೀಡಲು ನಿರ್ದೇಶನ ನೀಡಬಹುದು. ಡಿಸಿಗಳಿಗೂ ಕೆಲ ಅಧಿಕಾರ ಕೊಡಲಾಗಿದೆ. ಇನ್ನು ಸಾಮಾಜಿಕ ಬಹಿಷ್ಕಾರ ತಡೆಗೆ ಅಧಿಕಾರಿಗಳನ್ನು ನಿಯೋಜಿಸಲು ಮಸೂದೆಯಲ್ಲಿ ಅವಕಾಶ ಕೊಡಲಾಗಿದೆ.
ಮದುವೆ, ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುವುದಕ್ಕೆ ತಡೆಯೊಡ್ಡುವುದು, ವ್ಯಾಪಾರ, ಸಾಮಾಜಿಕ ಸಂಬಂಧಗಳಿಗೆ ತಡೆಯೊಡ್ಡುವುದು, ಮಕ್ಕಳನ್ನು ಒಟ್ಟಿಗೆ ಆಡಲು ಅಡ್ಡಿ ಪಡಿಸುವುದು, ಲಿಂಗತ್ವದ ಆಧಾರದ ಮೇಲೆ ಭೇದ ಮಾಡುವುದು, ಮಾನವ ಹಕ್ಕುಗಳನ್ನು ನಿರಾಕರಿಸುವುದು, ಬಟ್ಟೆ, ಭಾಷೆ, ಸಾಂಸ್ಕೃತಿಕ ಭೇದ ಎಸಗುವುದನ್ನು ಈ ಪ್ರಸ್ತಾಪಿತ ಮಸೂದೆಯಡಿ ನಿಷೇಧಿಸಲಾಗಿದೆ.



