ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಈ ಬಾರಿ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಗಜಪಡೆಗೆ ಬೀಳ್ಕೊಡುಗೆ ನೀಡಲಾಗಿದೆ. ಜಂಬೂಸವಾರಿಗೆಂದು ಮೈಸೂರಿಗೆ ಬಂದಿದ್ದ ಗಜಪಡೆ ಕಾಡಿನತ್ತ ಹೊರಟಿದೆ. ಅರಮನೆ ಆವರಣದಲ್ಲಿ ಆನೆಗಳಿಗೆ ಬೀಳ್ಕೊಡುಗೆ ನೀಡಲಾಗಿದ್ದು, ಸಾಂಪ್ರದಾಯಿಕ ಪೂಜೆ ನೆರವೇರಿಸಲಾಗಿದೆ.
14 ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಹಣ್ಣು ತಿನ್ನಿಸಲಾಯಿತು. ಎಲ್ಲ ಆನೆಗಳು ಏಕಕಾಲಕ್ಕೆ ಸೊಂಡಿಲನ್ನೆತ್ತಿ ನಮಿಸಿದವು. ಬಳಿಕ ಒಂದೊಂದಾಗಿ ಲಾರಿ ಏರಿದವು. ಅಭಿಮನ್ಯು, ಭೀಮ, ಪ್ರಶಾಂತ, ಮಹೇಂದ್ರ, ಏಕಲವ್ಯ, ಕಂಜನ್, ಧನಂಜಯ, ಲಕ್ಷ್ಮಿ, ಕಾವೇರಿ, ಶ್ರೀಕಂಠ, ಸುಗ್ರೀವ ,ಗೋಪಿ, ರೂಪ, ಹೇಮಾವತಿ ಆನೆಗಳು ಲಾರಿಗಳ ಮೂಲಕ ಕಾಡಿಗೆ ತೆರಳಲಿವೆ. ಇನ್ನು ಕಾಡಿಗೆ ಹೊರಟ ಆನೆಗಳ ಜೊತೆ ಪ್ರವಾಸಿಗರು ಸೆಲ್ಫಿಗೆ ಮುಗಿಬಿದ್ದ ಪ್ರಸಂಗವೂ ನಡೀತು.
ಕಳೆದ ಎರಡು ತಿಂಗಳ ಕಾಲ ದಸರೆಯ ನೆಪದಲ್ಲಿ ನಗರದಲ್ಲಿ ಬೀಡು ಬಿಟ್ಟು ಮನೋರಂಜನೆಯ ಕೇಂದ್ರವಾಗಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಜೊತೆ ಫೋಟೊ ಕ್ಲಿಕ್ಷಿಸಲು ಜನ ಮುಗಿಬಿದ್ದರು. ಮಕ್ಕಳು ಕಣ್ಣೀರ ವಿದಾಯ ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ