ರಾಜ್ಯದಲ್ಲಿ ಇಂದಿನಿಂದ ಹೊಸ ಜಿಎಸ್ಟಿ ದರ ಜಾರಿಗೆ ಬರುತ್ತಿದೆ. ಜಿಎಸ್ಟಿ ಸರಳೀಕರಣದ ಹೆಸರಿನಲ್ಲಿ ಬಿಜೆಪಿ ನಾಯಕರು ಉಳಿತಾಯ ಉತ್ಸವ ಮಾಡುವುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. 8 ವರ್ಷಗಳಿಂದ ಜಿಎಸ್ಟಿ ಲೂಟಿ ಉತ್ಸವ ಮಾಡುತ್ತಿದ್ದವ್ರು, ಈಗ ಉಳಿತಾಯ ಉತ್ಸವ ಮಾಡೋದರ ನಾಟಕ ಬೇಕಾ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಗಬ್ಬರ್ ಸಿಂಗ್ ದರೋಡೆಯ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ, ಅದಕ್ಕಾಗಿ ಉತ್ಸವ ಮಾಡಬೇಕಂತೆ! ಆದರೆ ಗಬ್ಬರ್ ಸಿಂಗ್ 8 ವರ್ಷಗಳಿಂದ ಮಾಡಿದ ಲೂಟಿಯನ್ನು ಜನ ಮರೆತುಬಿಡಬೇಕು. ಕೇಂದ್ರ ಸರ್ಕಾರದ ವರಸೆ ಇದೇನಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರನ್ನು ಬಾವಿಗೆ ತಳ್ಳಿದ್ದು ಇವರೇ, ಈಗ ಬಾವಿಯಿಂದ ಮೇಲಕ್ಕೆತ್ತಲು ಏಣಿ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಏಣಿ ಕೊಟ್ಟಿದ್ದಕ್ಕೆ ಕ್ರೆಡಿಟ್ ತೆಗೆದುಕೊಳ್ಳಲು ಹವಣಿಸುತ್ತಿದ್ದಾರೆ. ಆದರೆ 8 ವರ್ಷಗಳಿಂದ ಬಾವಿಗೆ ತಳ್ಳಿದ ಪಾಪದ ಹೊಣೆಗಾರರು ಮೋದಿಯವರೇ ಎಂದು ಖರ್ಗೆ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಅವರು ಹಲವು ಬಾರಿ ಗಬ್ಬರ್ ಸಿಂಗ್ ಟ್ಯಾಕ್ಸ್ ಕಡಿತಗೊಳಿಸಬೇಕು ಎಂದು ಆಗ್ರಹಿಸಿದಾಗ ಅವರ ಮಾತುಗಳನ್ನು ವ್ಯಂಗ್ಯ ಮಾಡಿದ್ದ ಬಿಜೆಪಿ, ಈಗ ಜನಾಕ್ರೋಶಕ್ಕೆ ಬೆದರಿ ಕಡಿತಗೊಳಿಸಿದ ಕ್ರೆಡಿಟ್ ತೆಗೆದುಕೊಳ್ಳುತ್ತಿರುವುದನ್ನು ಖರ್ಗೆ ಟೀಕಿಸಿದ್ದಾರೆ. ದುಬಾರಿ ಜಿಎಸ್ಟಿ ಜಾರಿಗೆ ತಂದಾಗಲೂ ‘ಮಾಸ್ಟರ್ ಸ್ಟ್ರೋಕ್’ ಅಂದರು, ಈಗ ಕಡಿತ ಮಾಡಿದರೂ ಅದನ್ನೇ ಮಾಸ್ಟರ್ ಸ್ಟ್ರೋಕ್ ಎನ್ನುತ್ತಿದ್ದಾರೆ. ಆದರೆ ಈ ಎಂಟು ವರ್ಷಗಳಲ್ಲಿ ಸಣ್ಣ-ಮಧ್ಯಮ ಕೈಗಾರಿಕೆಗಳ ಮುಚ್ಚುವಿಕೆ, ಉದ್ಯೋಗ ನಷ್ಟ, ಆರ್ಥಿಕತೆಗೆ ಆದ ಹೊಡೆತಕ್ಕೆ ಹೊಣೆ ಯಾರು? ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

