ವಿಶ್ವ ವಿಖ್ಯಾತ ನಾಡಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಕಾಡಿನಿಂದ ನಾಡಿಗೆ ಗಜಪಡೆ ಎಂಟ್ರಿ ಕೊಟ್ಟಿದೆ. ಸೋಮವಾರ ನಾಗರಹೊಳೆ ಸಮೀಪದ ವೀರನಹೊಸಹಳ್ಳಿಯಿಂದ ಗಜಯಪಣದ ಮೂಲಕ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ಮೊದಲ ತಂಡ ಮೈಸೂರಿಗೆ ಆಗಮಿಸಿದ್ದು, ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿವೆ.
ಸದ್ಯ ಗಜಪಡೆ ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ದಸರಾ ಆನೆಗಳನ್ನು ನೋಡಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಇನ್ನು ಆ. 10ರ ಸಂಜೆ ಗಜಪಡೆ ಅರಮನೆ ಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ಡಿಸಿಎಫ್ ಡಾ. ಪ್ರಭುಗೌಡ ಮಾಹಿತಿ ನೀಡಿದ್ದಾರೆ.
ಆ.10 ರಂದು ಸಂಜೆ 6:40 ರಿಂದ 7:20ರ ಶುಭ ಮಕರ ಗೋಧೋಳಿ ಲಗ್ನದಲ್ಲಿ ಜಯ ಮಾರ್ತಾಂಡ ದ್ವಾರದ ಮೂಲಕ ಗಜಪಡೆಯನ್ನು ಅರಮನೆಗೆ ಸಂಪ್ರದಾಯಿಕವಾಗಿ ಸ್ವಾಗತಿಸಲಾಗುತ್ತದೆ. ಇದೇ ಮೂದಲ ಬಾರಿಗೆ ಸಂಜೆ ವೇಳೆ ಗಜಪಡೆಯನ್ನು ಅರಮನೆಗೆ ಸ್ವಾಗತ ಮಾಡುತ್ತಿರುವುದು ವಿಶೇಷ ಎನ್ನಲಾಗಿದೆ.
ಅರಣ್ಯ ಭವನದ ಆವರಣದಲ್ಲಿ ವಾಸ್ತವ್ಯ ಹೂಡಿರುವ ಗಜಪಡೆಗೆ ಮಾವುತರು ಹಾಗೂ ಕಾವಾಡಿಗರು ಸ್ನಾನ ಮಾಡಿಸಿದರು. ಆನೆಗಳಿಗೆ ಭತ್ತ, ಹಸಿ ಹುಲ್ಲನ್ನು ಮೇವಾಗಿ ನೀಡಲಾಗುತ್ತಿದೆ. ಸದ್ಯ ಗಜಪಡೆ ಹಾಗೂ ಮಾವುತರು, ಕಾವಾಡಿಗರು ಮತ್ತವರ ಕುಟುಂಬಸ್ಥರು ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ಕಾಡಿನಿಂದ ನಾಡಿಗೆ ಆಗಮಿಸಿದ ಗಜಪಡೆಗೆ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಅವುಗಳ ರಕ್ತ ಪರೀಕ್ಷೆಯನ್ನು ಸಹ ಮಾಡಲಾಗಿದೆ. ಎಲ್ಲ ಆನೆಗಳು ಈ ಹಿಂದೆ ದಸರಾದಲ್ಲಿ ಭಾಗವಹಿಸಿರುವ ಕಾರಣ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದು, ದೂರದಿಂದಲೇ ಗಜಪಡೆಯನ್ನ ನೋಡಲು ಜನರಿಗೆ ಅವಕಾಶ ಮಾಡಿಕೊಡಲಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ