ರಾಜ್ಯ ರಾಜಕಾರಣದಲ್ಲಿ ಹೊಸ ಜಾಹೀರಾತು ವಿವಾದ ಸೃಷ್ಟಿಸಿದೆ. ವಿಬಿ ಜಿರಾಮ್‌ಜಿ ವಿಷಯಕ್ಕೆ ತಿರುಗೇಟು ನೀಡಲು ಮುಂದಾದ ಬಿಜೆಪಿ ತನ್ನ ಹೊಸ ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿಯನ್ನು ಕಾಂಗ್ರೆಸ್ ನಾಯಕರಿಗೆ ದೊಣ್ಣೆಯಿಂದ ಹೊಡೆಯುತ್ತಿರುವಂತೆ ಚಿತ್ರಿಸಿದೆ. ಈ ಜಾಹೀರಾತು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ಹುಟ್ಟಿಸಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಈ ವಿವಾದಾತ್ಮಕ ಜಾಹೀರಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಅವರು, ಅಂದು ಗೋಡ್ಸೆಗಳಿಂದ ಗಾಂಧೀಜಿಯವರ ಹತ್ಯೆ ನಡೆದಿತು. ಇಂದು ಗೋಡ್ಸೆಗಳಂತೆ ನಡೆದುಕೊಳ್ಳುತ್ತಿರುವವರಿಂದ ಗಾಂಧಿವಾದ ಹತ್ಯೆಯಾಗುತ್ತಿದೆ ಎಂದು ನೇರವಾಗಿ ಟೀಕೆ ಮಾಡಿದ್ದಾರೆ.
ಮಹಾತ್ಮ ಗಾಂಧೀಜಿಯನ್ನು ಅವಮಾನಿಸುತ್ತಿರುವುದು ಕಾಂಗ್ರೆಸ್ ವಿರುದ್ಧದ ರಾಜಕೀಯ ಹೊಡೆತವಲ್ಲ, ಬದಲಾಗಿ ದೇಶದ ಅಹಿಂಸಾ ತತ್ವಕ್ಕೆ ಅನಾಹುತ ಎಂದು ಖರ್ಗೆ ಹೇಳಿದ್ದಾರೆ. ಖರ್ಗೆ ಹೇಳಿರುವಂತೆ, ಗಾಂಧೀಜಿ ಎಂದಿಗೂ ಕೈ ಹಲ್ಲೆ ಮಾಡುವವರಲ್ಲ, ಸುಳ್ಳು ಮಾರ್ಗ ತೋರಿಸುವವರಲ್ಲ. ಮಹಾತ್ಮನ ಮಹತ್ವ ಅರಿಯದವರು ಅವರನ್ನು ಹಿಂಸಕ ನಟನೆಯಲ್ಲಿ ತೋರಿಸುತ್ತಿದ್ದಾರೆ. ಗಾಂಧೀಜಿಯವರ ತತ್ವಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದಿದ್ದಾರೆ.
ಚುನಾವಣಾ ಸಮೀಪಿಸುತ್ತಿರುವ ಹೊತ್ತಿನಲ್ಲಿ ರಾಜಕೀಯ ಪಕ್ಷಗಳು ಸಿದ್ಧಾಂತಗಳ ಹೆಸರಿನಲ್ಲಿ ಮಹಾಪುರುಷರನ್ನು ಬಳಸಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗಾಂಧೀಜಿಯವರಂತಹ ವ್ಯಕ್ತಿತ್ವವನ್ನು ಇಟ್ಟುಕೊಂಡು ಪರಸ್ಪರ ಕೆಸರೆರಚಾಟ ನಡೆಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಎದ್ದಿವೆ. ಸದ್ಯ ಪ್ರಿಯಾಂಕ್ ಖರ್ಗೆ ವಾಗ್ದಾಳಿಗೆ ಬಿಜೆಪಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ವರದಿ : ಲಾವಣ್ಯ ಅನಿಗೋಳ




