Friday, December 13, 2024

Latest Posts

Ganesh festival: ಹುಬ್ಬಳ್ಳಿಯ ಬೃಹತ್ ಗಣೇಶ ವಿಗ್ರಹಗಳಿಗಿದೆ ಪಶ್ಚಿಮ ಬಂಗಾಳ ಕಲಾವಿದರ ಸ್ಪರ್ಶ

- Advertisement -

ಹುಬ್ಬಳ್ಳಿ: ಗೌರಿ-ಗಣೇಶ ಹಬ್ಬಕ್ಕೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದೆ. ಈಗಾಗಲೇ ರಾಜ್ಯದಲ್ಲಿ ಗಣೇಶ ಕೂರಿಸಲು ಭರ್ಜರಿ ತಯಾರಿ ಶುರುವಾಗಿದೆ ಹೊರ ರಾಜ್ಯಗಳಿಂದ ಗಣೇಶ ಮೂರ್ತಿಗಳನ್ನು ಮಾಡುವ ತಯಾರಕರು ರಾಜ್ಯದಲ್ಲಿ ಬೀಡುಬಿಟ್ಟಿದ್ದಾರೆ. ಪ್ರತಿ ವರ್ಷ, ಪಶ್ಚಿಮ ಬಂಗಾಳದ ಕುಶಲಕರ್ಮಿಗಳು ಗಣೇಶನ ವಿಗ್ರಹಗಳನ್ನು, ಮೂರ್ತಿಗಳನ್ನು ತಯಾರಿಸಲು ಉತ್ತರ ಕರ್ನಾಟಕಕ್ಕೆ ಪ್ರಯಾಣಿಸುತ್ತಾರೆ. ಹುಬ್ಬಳ್ಳಿಯಲ್ಲಿ ಆಚರಿಸಲಾಗುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ನೆರೆಯ ಜಿಲ್ಲೆಗಳ ಜನರನ್ನೂ ಆಕರ್ಷಿಸುವ ದೈತ್ಯಾಕಾರದ ಮತ್ತು ಸೊಗಸಾದ ಗಣಪತಿ ಮೂರ್ತಿಗಳಿಗೆ ಪಶ್ಚಿಮ ಬಂಗಾಳದ ಕಲಾವಿದರ ಕಲೆಗಾರಿಕೆ ಮತ್ತು ಗಂಗಾ ನದಿಯ ದಡ ಮಣ್ಣಿನ ಘಮ ಸೇರಿದೆ.

ವಿಶೇಷವಾಗಿ ಹುಬ್ಬಳ್ಳಿಯಲ್ಲಿ ಆಚರಿಸಲಾಗುವ ಅದ್ಧೂರಿ ಗಣೇಶ ಹಬ್ಬದ ವೇಳೆ ಜನರನ್ನು ಆಕರ್ಷಿಸುವ ಗಣೇಶಗಳನ್ನು ತಯಾರಿಸಲು ಪಶ್ಚಿಮ ಬಂಗಾಳದ ಮೂರ್ತಿ ತಯಾರಕರು ಹುಬ್ಬಳ್ಳಿಗೆ ಆಗಮಿಸಿದ್ದು ವಿವಿಧ ಗಾತ್ರದ ಮತ್ತು ವಿವಿಧ ಭಂಗಿಗಳ ಗಣಪತಿ ಮೂರ್ತಿಗಳಿಗೆ ಬಣ್ಣ ಬಳಿಯುವುದು ಸೇರಿದಂತೆ ಅಂತಿಮ ಸ್ಪರ್ಶ ನೀಡುವಲ್ಲಿ ನಿರತರಾಗಿದ್ದಾರೆ. ಇನ್ನು ಇದರಲ್ಲಿ ಹೆಚ್ಚು ಕುತೂಹಲ ಕೆರಳಿಸುವ ಸಂಗತಿ ಎಂದರೆ, ಅವರು ಈ ವಿಗ್ರಹಗಳ ಅಂತಿಮ ಪದರಕ್ಕೆ (ಮೇಲ್ಮೈ) ಹೂಗ್ಲಿ ನದಿಯ ದಡದಿಂದ ತಂದ ಜೇಡಿಮಣ್ಣನ್ನು ಬಳಸುತ್ತಾರೆ.

ಹುಬ್ಬಳ್ಳಿಯ ಮರಾಠಾಗಲ್ಲಿಯಲ್ಲಿಯ ‘ಹುಬ್ಬಳ್ಳಿ ಕಾ ಮಹಾರಾಜ’ ಮತ್ತು ದಾಜಿಬಾನ್ ಪೇಟ್ನಲ್ಲಿರುವ ‘ಹುಬ್ಬಳ್ಳಿ ಕಾ ರಾಜ’ ಎಂಬ ಹೆಸರಿನ ಗಣೇಶಗಳು ಒಟ್ಟು 25 ಅಡಿ ಎತ್ತರವಿರುತ್ತವೆ. ಈ ಬೃಹತ್ ಗಾತ್ರದ ಗಣಪತಿ ಮೂರ್ತಿಗಳು ಗಣೇಶ ಹಬ್ಬದ ಕೇಂದ್ರ ಬಿಂದು. ಇಡೀ ಹುಬ್ಬಳ್ಳಿ, ರಾಜ್ಯ ಹೊರ ರಾಜ್ಯದ ಜನ ಈ ಗಣೇಶನ ದರ್ಶನಕ್ಕೆ ಬಂದು ಗಣೇಶ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಈ ಬೃಹತ್ ವಿಗ್ರಹಗಳನ್ನು ತಯಾರಿಸುವುದು ಪಶ್ಚಿಮ ಬಂಗಾಳದ ವಿಗ್ರಹ ತಯಾರಕರು.

ಕರ್ನಾಟಕ ರಾಜ್ಯದ 21 ಕಲಾವಿದರ ತಂಡದ ನೇತೃತ್ವ ವಹಿಸಿರುವ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರದ ಅಪ್ಪು ಪಾಲ್ ಅವರು ಈ ಬಾರಿ ಮರಾಠಗಲ್ಲಿಯ ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ವಿವಿಧ ಗಾತ್ರದ ಸುಮಾರು 90 ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಈ ತಂಡವು ಮೇ ತಿಂಗಳಿನಲ್ಲಿ ಹುಬ್ಬಳ್ಳಿಗೆ ಬಂದಿದ್ದು, ಹುಬ್ಬಳ್ಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಮಾತ್ರವಲ್ಲದೆ ಕೊಪ್ಪಳ, ರಾಣೆಬೆನ್ನೂರು, ಗದಗ, ದಾಂಡೇಲಿ ಮತ್ತು ಗುಂತ್ಕಲ್‌ನ ಸಮಿತಿಗಳಿಗೂ ಮೂರ್ತಿಗಳನ್ನು ಸಿದ್ಧಪಡಿಸಿ ಕೊಡುತ್ತದೆ.

ಹುಬ್ಬಳ್ಳಿ ಕಾ ಮಹಾರಾಜ

ಇನ್ನು ಗಣೇಶ ವಿಗ್ರಹ ತಯಾರಿಕೆಯ ಕೊನೆಯ ಹಂತಕ್ಕೆ ನುಣ್ಣನೆಯ ಮಣ್ಣು ಬೇಕು. ಹೀಗಾಗಿ ಈ ಬಾರಿ ಕೋಲ್ಕತ್ತಾದಿಂದ ಎರಡು ಟ್ರಕ್ ಲೋಡ್ ಜೇಡಿಮಣ್ಣು ತರಿಸಲಾಗಿದೆ. ಈ ಭಾಗದಿಂದಲೇ ಐದು ಟ್ರ್ಯಾಕ್ಟರ್ ಜೇಡಿಮಣ್ಣನ್ನು ಸಂಗ್ರಹಿಸಿದ್ದೇವೆ. ಮರದ ಕೋಲು, ಬಿದುರು, ಒಣಗಿದ ಹುಲ್ಲು ಬಳಸಿ ವಿಗ್ರಹಗಳ ಮೂಲ ಆಕಾರವನ್ನು ತಯಾರಿಸಿ ಬಳಿಕ ನುಣ್ಣನೆಯ ಮಣ್ಣನ್ನು ಮೂರ್ತಿ ಹಚ್ಚುತ್ತೇವೆ ಎಂದು ಪಾಲ್ ತಿಳಿಸಿದರು.

3 ರಿಂದ 25 ಅಡಿ ಎತ್ತರದ ಗಣೇಶ
ನಾವು ಮೂರಡಿಯಿಂದ 25 ಅಡಿ ಎತ್ತರದ ಮೂರ್ತಿಗಳನ್ನು ಸಿದ್ಧಪಡಿಸಿದ್ದೇವೆ. ಕೂಲಿ ಹಾಗೂ ಕಚ್ಚಾವಸ್ತುಗಳ ದುಬಾರಿ ಬೆಲೆಯಿಂದಾಗಿ ಈ ಬಾರಿ ತಯಾರಿಸಿರುವ ಮೂರ್ತಿಗಳ ಬೆಲೆಯನ್ನು 10 ಸಾವಿರದಿಂದ ಐದು ಲಕ್ಷ ರೂ.ವರೆಗೆ ನಿಗದಿ ಮಾಡಿದ್ದೇವೆ. ಸುಮಾರು 25 ಅಡಿ ಎತ್ತರವಿರುವ ‘ಹುಬ್ಬಳ್ಳಿ ಕಾ ಮಹಾರಾಜ’ ಮೂರ್ತಿ ಈ ಬಾರಿ ನಾವು ಇಲ್ಲಿ ಸಿದ್ಧಪಡಿಸಿರುವ ಅತಿದೊಡ್ಡ ವಿಗ್ರಹವಾಗಿದೆ. ಮ್ಯಾದರ್ ಓಣಿಯಲ್ಲಿ ಕೂರಿಸಲು 18 ಅಡಿ ಎತ್ತರದ ವಿಗ್ರಹವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪಾಲ್ ಹೇಳಿದರು.

ಅಪ್ಪು ಪಾಲ್ ಅವರು 1995 ರಲ್ಲಿ ಗಣಪತಿ ಮೂರ್ತಿಗಳನ್ನು ತಯಾರಿಸಲು ಹುಬ್ಬಳ್ಳಿಗೆ ಬಂದರು. ಅಂದಿನಿಂದ ಈ ಪ್ರದೇಶದ ಗಣೇಶೋತ್ಸವ ಸಮಿತಿಗಳಲ್ಲಿ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಕನಿಷ್ಠ ನಾಲ್ಕು ತಿಂಗಳ ಮುಂಚಿತವಾಗಿ ಅಪ್ಪು ಪಾಲ್ ಅವರು ತಾವು ಸಿದ್ಧಪಡಿಸಬೇಕಾದ ವಿಗ್ರಹಗಳ ಗಾತ್ರ ಮತ್ತು ಇತರ ಅಂಶಗಳಂತಹ ವಿವರಗಳೊಂದಿಗೆ ಗಣೇಶ ತಯಾರಿಕೆಯ ಆಡಾರ್ ಪಡೆಯುತ್ತಾರೆ. ಕೊರೊನಾ ರೋಗದಿಂದಾಗಿ 2020 ಮತ್ತು 2021 ರಲ್ಲಿ ಅಪ್ಪು ಪಾಲ್ ಅವರ ತಂಡ ಹುಬ್ಬಳ್ಳಿಗೆ ಬರಲು ಸಾಧ್ಯವಾಗಿರಲಿಲ್ಲ.

“ನಾನು ಕಲಾವಿದರ ಕುಟುಂಬದಿಂದ ಬಂದಿದ್ದೇನೆ, ಮತ್ತು ನನ್ನ ತಂದೆ ಕೂಡ ಪ್ರಸಿದ್ಧ ವಿಗ್ರಹ ತಯಾರಕರಾಗಿದ್ದರು. ಸ್ಥಳದ ಕೊರತೆಯಿಂದಾಗಿ ಬೇಡಿಕೆಯಿದ್ದರೂ ಹೆಚ್ಚಿನ ವಿಗ್ರಹಗಳನ್ನು ಮಾಡಲು ನನಗೆ ಸಾಧ್ಯವಾಗುತ್ತಿಲ್ಲ” ಎಂದು ಅವರು ಹೇಳಿದರು.

ಗಣೇಶೋತ್ಸವದ ನಂತರ, ಪಾಲ್ ತಂಡವು ದಸರಾ (ನವರಾತ್ರಿ) ಹಬ್ಬಕ್ಕಾಗಿ ದುರ್ಗಾಮಾತೆ ಮತ್ತು ಶೆರಾವಳಿ ಮೂರ್ತಿಗಳನ್ನು ಸಿದ್ಧಪಡಿಸಲು ಪ್ರಾರಂಭಿಸುತ್ತದೆ ಮತ್ತು ಈ ಬಾರಿ, ಅಂತಹ 20 ಕ್ಕೂ ಹೆಚ್ಚು ಮೂರ್ತಿಗಳನ್ನು ಸಿದ್ಧಪಡಿಸಲು ಅವರಿಗೆ ಆರ್ಡರ್ ಸಿಕ್ಕಿದೆ. ಇದರ ನಡುವೆ ಪಶ್ಚಿಮ ಬಂಗಾಳದ ಸಂಜಯ್ ಹಲ್ದಾರ್ ನೇತೃತ್ವದ ತಂಡವು ‘ಹುಬ್ಬಳ್ಳಿ ಕಾ ರಾಜ’ ಎಂಬ ಮತ್ತೊಂದು ದೊಡ್ಡ ಗಣಪತಿ ಮೂರ್ತಿಯನ್ನು ಸಿದ್ಧಪಡಿಸುತ್ತಿದೆ.

Post Office: ವಿಮಾ ಅರ್ಜಿ ತಿರಸ್ಕರಿಸಿದ ಅಂಚೆ ಇಲಾಖೆಗೆ ಗ್ರಾಹಕರ ಆಯೋಗ ದಂಡ..!

Chaithra Kundapura : ಉದ್ಯಮಿಗೆ ಕೋಟ್ಯಾಂತರ ರೂಪಾಯಿ ವಂಚನೆ : ಚೈತ್ರಾ ಕುಂದಾಪುರ ಅರೆಸ್ಟ್

Congress: ಯಾರೇ ಸೇರಿದರು ನಾವು ಹೆಚ್ಚು ಸೀಟು ಗೆಲ್ಬೇಕು ಗೆಲ್ತಿವಿ..!

- Advertisement -

Latest Posts

Don't Miss