www.karnatakatv.net :ತುಮಕೂರು: ಗಣೇಶ ಚತುರ್ಥಿ ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಶ್ರೇಷ್ಠ ಹಬ್ಬಗಳಲ್ಲಿ ಒಂದು. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಹಬ್ಬ ಅಂದರೆ ಅಚ್ಚುಮೆಚ್ಚು. ಇತ್ತೀಚಿನ ದಿನಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹತ್ತಾರು ನಿರ್ಬಂಧನೆಗಳನ್ನು ಸರ್ಕಾರ ವಿಧಿಸಿದ್ದು ಇವುಗಳ ಮಧ್ಯೆ ಸರಳ ಗಣೇಶೋತ್ಸವಕ್ಕೆ ತಾಲೂಕಿನ ಸಿದ್ದನ ಕಟ್ಟೆಯ ವಿಶ್ವಮಾತಾ ಗೋಶಾಲೆಯಲ್ಲಿ ಸಿದ್ಧಗೊಂಡಿದೆ.
ದೇಶದಲ್ಲಿ ಸತತ ಎರಡು ವರ್ಷಗಳಿಂದ ಕೊರೊನಾದಿಂದ ಸಭೆ-ಸಮಾರಂಭ ಹಾಗೂ ಹಬ್ಬ, ಜಾತ್ರೆಗಳ ಸಡಗರವನ್ನು ಮೊಟಕುಗೊಳಿಸಲಾಗಿತ್ತು. ಆದರೆ ಈ ವರ್ಷ ಗಣೇಶೋತ್ಸವಕ್ಕೆ ಸರ್ಕಾರ ಸ್ವಲ್ಪಮಟ್ಟಿನ ಉದಾರತೆ ತೋರಿದ್ದು ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸಲು ಸೂಚಿಸಿದೆ. ಇದರ ನಡುವೆ ಗಣೇಶ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಹಾಗೂ ಹಬ್ಬದ ಸಡಗರವನ್ನು ಹೆಚ್ಚಿಸಲು ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ಧಕಟ್ಟೆಯ ವಿಶ್ವಮತ ಗೋಶಾಲೆಯ ವ್ಯವಸ್ಥಾಪಕ ಶ್ರೀ ಹರಿ ರವರು ದೇಸಿ ಹಸುಗಳ ಸಗಣಿಯಿಂದ ಗಣಪತಿ ಮೂರ್ತಿಯನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಹಿಂದೂ ಸಂಸ್ಕೃತಿಯಲ್ಲಿ ಯಾವುದೇ ಪೂಜೆ ಆರಂಭಕ್ಕೂ ಮೊದಲು ಸಗಣಿಯಿಂದ ಪಿಲ್ಲರಿ ಗಣಪತಿ ಪೂಜೆ ಮಾಡುವುದು ಸಂಪ್ರದಾಯ. ಮೊದಲ ಪೂಜೆಯ ಅಧಿಪತಿ ಗಣಪತಿಯೇ ಆಗಿದ್ದು, ಹಸುವಿನ ಸಗಣಿಯಿಂದ ಮಾಡಿದ ಸಣ್ಣ ಉಂಡೆಗೆ ಗರಿಕೆ ಇಟ್ಟು ಪೂಜಿಸಲಾಗುತ್ತದೆ, ಆದರೆ ಇಲ್ಲಿನ ಗೋಶಾಲೆಯಲ್ಲಿ ತಯಾರಿಸಿದ ಗಣಪತಿ ಮೂರ್ತಿ ಸಂಪೂರ್ಣವಾಗಿ ಸಗಣಿಯಿಂದ ತಯಾರಿಸಲಾಗಿದ್ದು ಈ ಗಣಪತಿ, ಪೂಜೆಗೆ ಶ್ರೇಷ್ಠ ಎಂಬ ನಂಬಿಕೆ ಇದೆ.
ಒಟ್ನಲ್ಲಿ ಪೂಜೆಗಳ ಅಧಿಪತಿ ವಿಘ್ನವಿನಾಶಕನನ್ನ ಗೋಮಯದಿಂದ ತಯಾರಿಸಿ ಮಾಡಿದ್ರೆ, ಅದು ಶ್ರೇಷ್ಠಾತಿ ಶ್ರೇಷ್ಠ ಎನ್ನುವ ನಂಬಿಕೆ ವಿಶ್ವಮತ ಗೋಶಾಲೆ ವ್ಯವಸ್ಥಾಪಕರದ್ದು.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು