ಸ್ವಪಕ್ಷೀಯ ಸರ್ಕಾರಕ್ಕೇ ಎಚ್ಚರಿಕೆ ನೀಡಿದ ಮಂಡ್ಯ ಶಾಸಕ ಗಣಿಗ ರವಿಕುಮಾರ್!

ಕರ್ನಾಟಕ-ತಮಿಳುನಾಡು ಕಾವೇರಿ ಜಲವಿವಾದ ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸದ್ದು ಮಾಡುತ್ತಿದೆ. ಇದರ ನಡುವೆ ಸ್ವಪಕ್ಷೀಯ ಕಾಂಗ್ರೆಸ್ ಸರ್ಕಾರಕ್ಕೇ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರೆ ಸರ್ಕಾರದ ವಿರುದ್ಧ ತಾವೇ ಖುದ್ದು ಬೀದಿಗಿಳಿದು ಹೋರಾಟ ಮಾಡುವುದಾಗಿ ಗುಡುಗಿದ್ದಾರೆ. ಜೊತೆಗೆ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಮೇೆಯೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಶಾಸಕ ಗಣಿಗ ರವಿಕುಮಾರ್, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಸರ್ಕಾರಕ್ಕೆ ಸ್ಪಷ್ಟವಾಗಿ ಆಗ್ರಹಿಸಿದ್ದಾರೆ. “ನಾನು ರೈತರ ಪರ, ರೈತರಿಗಾಗಿ ಹೋರಾಟ ಮಾಡುತ್ತೇನೆ. ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟರೆ ಸುಮ್ಮನಿರೋದಿಲ್ಲ, ನಾನೇ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯುತ್ತೇನೆ” ಎಂದು ನೇರ ಸವಾಲು ಹಾಕಿದ್ದಾರೆ. ಸದ್ಯ ಕಬಿನಿ ಜಲಾಶಯ ತುಂಬಿರುವುದರಿಂದ ನೀರು ಹರಿದುಹೋಗುತ್ತಿದೆ ಹೊರತು, ಸರ್ಕಾರ ಉದ್ದೇಶಪೂರ್ವಕವಾಗಿ ನೀರು ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರೂ, ಒಂದು ವೇಳೆ ಉದ್ದೇಶಪೂರ್ವಕವಾಗಿ ನೀರು ಬಿಟ್ಟರೆ ಮುಖ ನೋಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಕನ್ನಡಪರ ಹೋರಾಟಗಾರರು ಕರೆ ನೀಡಿರುವ ಕರ್ನಾಟಕ ಬಂದ್‌ಗೂ ಅವರು ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದು, ನೆಲ-ಜಲದ ವಿಷಯಕ್ಕಾಗಿ ಹೋರಾಟ ಮಾಡುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಇದೇ ವೇಳೆ, ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧವೂ ಗಣಿಗ ರವಿಕುಮಾರ್ ಕಿಡಿಕಾರಿದ್ದಾರೆ. “ಬಿಜೆಪಿ ಮತ್ತು ಜೆಡಿಎಸ್‌ನವರು ಎಷ್ಟು ಜನ ಜಾಮೀನಿನ ಮೇಲೆ ಹೊರಗಿದ್ದಾರೆ? ಕೋರ್ಟ್ ಬೇಲ್ ಕೊಟ್ಟಮೇಲೆ ಮಾತನಾಡಲು ಇವರ್ಯಾರು? ಹೆಚ್.ಡಿ. ಕುಮಾರಸ್ವಾಮಿ ಹಾಗೂ ರೇವಣ್ಣ ಮೇಲೂ ಪ್ರಕರಣಗಳಿವೆ, ಹಾಗಾದರೆ ಇವರೇನು ಮಾಡುತ್ತಾರೆ?” ಎಂದು ತೀವ್ರವಾಗಿ ಪ್ರಶ್ನಿಸಿದ್ದಾರೆ. ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ, ಅದಕ್ಕಾಗಿಯೇ ಹೀಗೆಲ್ಲ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಆಡಳಿತ ಪಕ್ಷದ ಶಾಸಕರೊಬ್ಬರೇ ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿ ಎಚ್ಚರಿಕೆ ನೀಡಿರುವುದು ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಹಾಗೂ ಸಂಚಲನಕ್ಕೆ ದಾರಿ ಮಾಡಿಕೊಟ್ಟಿದೆ.

About The Author