ಹುಬ್ಬಳ್ಳಿ : ಅವಳಿ ನಗರದ ಅಭಿವೃದ್ಧಿಗೆ ಪಣ ತೊಡಲಾಗಿದೆ. ಎರಡು ನಗರಗಳನ್ನು ಸ್ವಚ್ಛ ನಗರ, ಸುಂದರ ನಗರವಾಗಿಸಲು ಒತ್ತು ನೀಡಲಾಗಿರುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಹೇಳಿದರು.
ಇಲ್ಲಿನ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಅವಳಿ ನಗರದಲ್ಲಿ 82 ವಾರ್ಡ್ ಗಳಿವೆ. ನಗರದ ಜನರಿಗೆ ಶುದ್ಧ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ರಸ್ತೆಗಳು, ವಿದ್ಯುತ್ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ಒದಗಿಸುವ ಧ್ಯೇಯವನ್ನು ಹೊಂದಲಾಗಿದೆ. ಸಾರ್ವಜನಿಕರು ಸ್ವಚ್ಛತೆಗೆ ಗಮನ ನೀಡಬೇಕು. ತಮ್ಮ ತಮ್ಮ ಪ್ಲಾಟ್ ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ. ಸುಂದರ ನಗರವಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಪಾಲಿಕೆಯ ಜೊತೆ ಕೈ ಜೋಡಿಸಬೇಕು ಎಂದರು.
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಮೂಲಕ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 12 ವಲಯಗಳಿಂದ ರಸ್ತೆ ಗುಂಡಿ ಮುಚ್ಚುವಿಕೆ ಕಾರ್ಯ ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಆರಂಭವಾಗಲಿದೆ. ಸಾರ್ವಜನಿಕರಿಂದ ಬಂದ ದೂರುಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುತ್ತಿದೆ. ಪಾಲಿಕೆಯ ಅತಿಕ್ರಮಣ ಜಾಗಗಳನ್ನು ಗುರುತಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ರಸ್ತೆ ಹಂಪ್ಸ್ ಹಾಕಲಾಗಿದ್ದು, ಕೆಲವನ್ನು ತೆರವುಗೊಳಿಸಲಾಗಿದೆ. ಉಳಿದವುಗಳನ್ನು ಆದಷ್ಟು ಬೇಗ ತೆಗೆದು ಹಾಕಲಾಗುತ್ತದೆ ಎಂದು ಹೇಳಿದರು.
ಹಸಿ ಕಸ, ಒಣ ಕಸ ಸಂಗ್ರಹ: ಕಸ ಸಂಗ್ರಹ ಕಾರ್ಯವು ಬೆಳಿಗ್ಗೆ 5.30 ಗಂಟೆಯಿಂದ ಮಧ್ಯಾಹ್ನದವರೆಗೆ ನಡೆಯುತ್ತದೆ. ಜನರು ತಮ್ಮ ಮನೆ, ಅಂಗಡಿಗಳಲ್ಲಿನ ಕಸವನ್ನು ಹಸಿ ಕಸ ಹಾಗೂ ಒಣ ಕಸವೆಂದು ಪ್ರತ್ಯೇಕಿಸಬೇಕು. ಕಸ ಸಂಗ್ರಹದ ವಾಹನ ತಮ್ಮ ಮನೆಗಳ ಬಳಿ ಬಂದಾಗ ಕಸವನ್ನು ವಾಹನದಲ್ಲಿ ಹಾಕಬೇಕು ಹೊರತು ಎಲ್ಲೆಂದರಲ್ಲಿ ಚೆಲ್ಲಬಾರದು. ಬೇಕಾಬಿಟ್ಟಿಯಾಗಿ ಕಸ ಚೆಲ್ಲವುದರಿಂದ ರೋಗಗಳು ಹರಡುತ್ತವೆ. ಪಾರಂಪಾರಿಕ ತ್ಯಾಜ್ಯವನ್ನು ತುರ್ತಾಗಿ ವಿಲೇವಾರಿ ಮಾಡಲಾಗುವುದು. ಮುಂದಿನ ಒಂದು ತಿಂಗಳಲ್ಲಿ ಕಸ ವಿಲೇವಾರಿ ಕಾರ್ಯಗಳು ಮುಗಿಯಲಿವೆ. ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅವರು ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಶೀಘ್ರದಲ್ಲೇ ಇ ಸ್ವತ್ತು ಸರ್ವರ್ ಸಮಸ್ಯೆ ಇತ್ಯರ್ಥ :ಇ ಸ್ವತ್ತು ಸರ್ವರ್ ಸಮಸ್ಯೆ ಕುರಿತಾಗಿ ಹಲವಾರು ದೂರುಗಳು ಬಂದಿವೆ. ಈ ಹಿನ್ನಲೆಯಲ್ಲಿ ಕೂಡಲೇ ಇ ಸ್ವತ್ತು ಸರ್ವರ್ ಸಮಸ್ಯೆಯನ್ನು ಬಗೆಹರಿಸಲಾಗುವುದು. ಕಡತ ಯೋಜನೆಯಡಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಸಕಾಲ ಸೇವೆಯಂತೆ ಕಡತ ಯೋಜನೆಯಡಿ ವಿವಿಧ ಅರ್ಜಿಗಳಿಗೆ ಅವಧಿಯನ್ನು ನಿಗದಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲಕುಂಟ್ಲ, ಮುಖ್ಯ ಲೆಕ್ಕಾಧಿಕಾರಿ ಸತ್ಯಪ್ಪ ನರಗಟ್ಟಿ, ಅಧೀಕ್ಷಕ ಅಭಿಯಂತರರಾದ ತಿಮ್ಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
Flag Fight: ಟವರ್ನಲ್ಲಿ ಇಸ್ಲಾಂ ಬಾವುಟದ ಕೆಳಗೆ ಭಗವಾ ಧ್ವಜ ಕಟ್ಟಿದ ಆರೋಪ,
GruhaLaxmi: ಕರೆಂಟ್ ಬಿಲ್ ಕೊಡಲು ಹೋದ ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ: