ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಸೇರಿದಂತೆ ಹಲವು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪದ ಬೆನ್ನಲ್ಲೇ ಚುನಾವಣಾ ಆಯೋಗವು ದೇಶದ ಚುನಾವಣಾ ವ್ಯವಸ್ಥೆಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ.
ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸುವ ಪ್ರಯತ್ನವಾಗಿ ಭಾರತದ ಚುನಾವಣಾ ಆಯೋಗ 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ರದ್ದುಗೊಳಿಸಿದೆ. ಈ ಕ್ರಮದಿಂದಾಗಿ ದೇಶದಲ್ಲಿ ನೋಂದಾಯಿತ ಒಟ್ಟು ಪಕ್ಷಗಳ ಸಂಖ್ಯೆ 2,854 ರಿಂದ 2,520ಕ್ಕೆ ಇಳಿದಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಮತ್ತು ನಿರಂತರ ಕಾರ್ಯತಂತ್ರ ದ ಭಾಗವಾಗಿ ಚುನಾವಣಾ ಆಯೋಗ ಇಂಥದ್ದೊಂದು ಮಹತ್ವದ ಕ್ರಮ ಕೈಗೊಂಡಿದೆ. ಆಯೋಗವು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳ ವರದಿಗಳು ಮತ್ತು ಶಿಫಾರಸುಗಳನ್ನು ಪರಿಶೀಲಿಸಿದ ನಂತರ ಶನಿವಾರ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.
ಚುನಾವಣಾ ಆಯೋಗವು ಈ ಕ್ರಮವನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಂದ ಬಂದ ವರದಿಗಳು ಮತ್ತು ಶಿಫಾರಸುಗಳನ್ನು ಪರಿಶೀಲಿಸಿದ ನಂತರ ಕೈಗೊಂಡಿದೆ. ಚುನಾವಣಾ ಆಯೋಗದ ಪ್ರಕಾರ, ಒಂದು ಪಕ್ಷವು ನೋಂದಣಿಯಲ್ಲಿ ಉಳಿಯಲು ನಿರಂತರವಾಗಿ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವುದು ಕಡ್ಡಾಯವಾಗಿದೆ.
ಅಲ್ಲದೆ, ಜನತಾ ಪ್ರಾತಿನಿಧ್ಯ ಕಾಯಿದೆ, 1951 ರ ಸೆಕ್ಷನ್ 29ಎ ಅಡಿಯಲ್ಲಿ, ಪಕ್ಷಗಳು ತಮ್ಮ ಹೆಸರು, ವಿಳಾಸ, ಪದಾಧಿಕಾರಿಗಳು ಮತ್ತು ಯಾವುದೇ ಬದಲಾವಣೆಗಳ ವಿವರಗಳನ್ನು ಆಯೋಗಕ್ಕೆ ತಕ್ಷಣವೇ ಸಲ್ಲಿಸಬೇಕು. ಈ ವರ್ಷದ ಜೂನ್ ತಿಂಗಳಲ್ಲಿ, ಆಯೋಗವು 345 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ನಿಯಮಗಳ ಅನುಸರಣೆಯನ್ನು ಪರಿಶೀಲಿಸಲು ನಿರ್ದೇಶಿಸಿತ್ತು. ವಿಚಾರಣೆ ಮತ್ತು ನೋಟಿಸ್‌ಗಳ ನಂತರ, 334 ಪಕ್ಷಗಳು ನೋಂದಣಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಉಳಿದ 11 ಪಕ್ಷಗಳ ಪ್ರಕರಣಗಳನ್ನು ಮತ್ತಷ್ಟು ಪರಿಶೀಲನೆಗೆ ಕಳುಹಿಸಲಾಗಿದೆ.
ಕರ್ನಾಟಕದಲ್ಲಿ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಪಟ್ಟಿಯು ಚುನಾವಣಾ ಆಯೋಗದ ನಿರ್ಧಾರಗಳಿಂದಾಗಿ ಬದಲಾಗಬಹುದು.
ಇತ್ತೀಚಿನ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಇರುವ ಕೆಲವು ನೋಂದಾಯಿತ, ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು:
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (KRS ಪಕ್ಷ), ಕರ್ನಾಟಕ ಮಕ್ಕಳ ಪಕ್ಷ, ಕರ್ನಾಟಕ ಕಾರ್ಮಿಕರ ಪಕ್ಷ, ರಾಣಿ ಚೆನ್ನಮ್ಮ ಪಕ್ಷ, ಬೆಂಗಳೂರು ನವ ನಿರ್ಮಾಣ ಪಕ್ಷ, ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷ, ಉತ್ತಮ ಪ್ರಜಾಕೀಯ ಪಾರ್ಟಿ, ಭಾರತೀಯ ಪೀಪಲ್ಸ್ ಪಾರ್ಟಿ, ಭಾರತೀಯ ಜನಶಕ್ತಿ ಕಾಂಗ್ರೆಸ್, ಕರ್ನಾಟಕ ಪ್ರಜಾ ಪಕ್ಷ (ರೈತಪರ್ವ), ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ), ಕರುನಾಡು ಪಾರ್ಟಿ, ಯಂಗ್ ಇಂಡಿಯಾ ಟ್ಯಾಂಗ್ರೇಸ್ ಪಾರ್ಟಿ, ತುಳುವೆರೆ ಪಕ್ಷ. ಈ ಎಲ್ಲಾ ಪಕ್ಷಗಳು ಚುನಾವಣಾ ಆಯೋಗದ ನಿರ್ಧಾರಗಳಿಂದಾಗಿ ರದ್ದಾಗಬಹುದು. ಚುನಾವಣಾ ಆಯೋಗದಿಂದ ಮಾನ್ಯತೆ ರದ್ದಾದ ಪಕ್ಷಗಳ ಹೆಸರುಗಳು ತಿಳಿದುಬಂದಿಲ್ಲ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ