ಗ್ರೇಟರ್ ಬೆಂಗಳೂರು ಅಥಾರಿಟಿ ಸೇರಿದಂತೆ ರಾಜ್ಯದ ವಿವಿಧ ಚುನಾವಣೆಗಳು ನಿಗದಿಯಾಗಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿಯು ಮುಂದಿನ ಚುನಾವಣೆಗಳಿಗೆ ಸಜ್ಜಾಗುತ್ತಿದೆ. ಹಾಗಾಗಿ ಪಕ್ಷವು ರಾಜ್ಯದ ಎಲ್ಲ ಶಾಸಕರು, ಸಂಸದರು ಮತ್ತು ಇತರ ಚುನಾವಣೆಯಿಂದ ಆಯ್ಕೆಯಾದ ಪ್ರತಿನಿಧಿಗಳಿಗಾಗಿ ಸೆಪ್ಟೆಂಬರ್ 19 ರಿಂದ ಎರಡು ದಿನಗಳ ಕಾರ್ಯಾಗಾರವನ್ನು ಬೆಂಗಳೂರು ನಗರದಲ್ಲಿ ಆಯೋಜಿಸಿದೆ.
ಈ ಕಾರ್ಯಾಗಾರದಲ್ಲಿ ಕೇಂದ್ರ ಸಚಿವರು ಧರ್ಮೇಂದ್ರ ಪ್ರದಾನ್, ಪ್ರಹ್ಲಾದ್ ಜೋಶಿ ಮತ್ತು ರಾಷ್ಟ್ರೀಯ ನಾಯಕ ಬಿಎಲ್ ಸಂತೋಷ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಈ ಬಗ್ಗೆ ಮಾತನಾಡಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥರು ಮತ್ತು ವಿವಿಧ ಜಿಲ್ಲೆಗಳ ಪ್ರಮುಖ ಮುಖಂಡರೂ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಮಾಹಿತಿ ನೀಡಿದ್ದಾರೆ. ಈ ಕಾರ್ಯಾಗಾರದಲ್ಲಿ ಪಕ್ಷದ ಇತಿಹಾಸ, ಜನಸಂಘದ ಕೊಡುಗೆ, ಶ್ಯಾಮ ಪ್ರಸಾದ್ ಮುಖರ್ಜಿಯಿಂದ ನರೇಂದ್ರ ಮೋದಿ ವರೆಗೆ ಬಿಜೆಪಿಯ ಬೆಳವಣಿಗೆ ಮತ್ತು ನಾಯಕತ್ವದ ಪಾಠಗಳನ್ನು ನೀಡಲಾಗುತ್ತದೆ ಎಂದಿದ್ದಾರೆ. ಇನ್ನು ಸಮಾವೇಶದಲ್ಲಿ 270ಕ್ಕೂ ಹೆಚ್ಚು ಶಾಸಕರು, ಸಂಸದರು ಮತ್ತು ಪಕ್ಷದ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ.
ಈ ಕಾರ್ಯಾಗಾರದಲ್ಲಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸಕರು, ಸಂಸದರು ಮತ್ತು ಸ್ಥಳೀಯ ನಾಯಕರಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ನೀಡುವ ಬಗ್ಗೆ ಚರ್ಚೆಗಳು ನಡೆಯಲಿವೆ. ಶಕ್ತಿಶಾಲಿ ಬೂತ್ ನಿರ್ವಹಣೆಯಿಂದ ಹಿಡಿದು ವೋಟ್ ಬ್ಯಾಂಕ್ ಸಂಘಟನೆ, ಸಮುದಾಯ ಸಂಪರ್ಕ ಮೊದಲಾದವುಗಳ ಬಗ್ಗೆ ರಣತಂತ್ರ ರೂಪಿಸಲಾಗುತ್ತಿದೆ.
ಇತ್ತ ಕಾಂಗ್ರೆಸ್ ಪಕ್ಷವೂ ಜಿಬಿಎ ಚುನಾವಣೆಗೆ ತನ್ನ ತಯಾರಿಗಳನ್ನು ಆರಂಭಿಸಿದೆ. ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕರಡು ಯೋಜನೆಗಳು ರೂಪುಗೊಂಡಿವೆ. ಸಮಿತಿಗಳ ರಚನೆ ಮತ್ತು ಸಚಿವರಿಗೆ ನಿಗದಿತ ಜವಾಬ್ದಾರಿಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕೃತ ಪ್ರಣಾಳಿಕೆ ಮತ್ತು ಕಾರ್ಯತಂತ್ರ ಬಹಿರಂಗವಾಗುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ನಗರ ರಾಜಕೀಯ ಕಣದ ಮೇಲೆ ರಾಷ್ಟ್ರೀಯ ಮಟ್ಟದ ಗಮನ ಬೀಳುವ ಸಾಧ್ಯತೆಯಿದೆ.
ವರದಿ : ಲಾವಣ್ಯ ಅನಿಗೋಳ