ಚಿಕ್ಕಬಳ್ಳಾಪುರ : ಶಿವಮೊಗ್ಗ ತಾಲ್ಲೂಕಿನ ಹುಣಸೇಡು ಕಲ್ಲು ಕ್ವಾರೆ ಪ್ರದೇಶದಲ್ಲಿ ಜಿಲೇಟಿನ್ ಸ್ಫೋಟ ಸಂಭವಿಸಿದ ಬೆನ್ನಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಬಳಿ ಇರುವ ಹಿರೇನಾಗೇನಹಳ್ಳಿ ಗ್ರಾಮದ ಬಳಿ ಮತ್ತೊಂದು ಜಿಲೇಟಿನ್ ಸ್ಫೋಟಗೊಂಡು ಆರು ಮಂದಿ ಮೃತ ಪಟ್ಟಿದ್ದಾರೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು, ಜಿಲೆಟಿನ್ ಸ್ಪೋಟದ ತೀವ್ರತೆಗೆ ಸುತ್ತಮುತ್ತಲಿನ ಗ್ರಾಮಗಳ ಹಲವಾರು ಮನೆಗಳು ಬಿರುಕು ಬಿಟ್ಟಿವೆ.
ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಯಿ, ಸ್ಪೋಟಕ್ಕೆ ಸಂಬಂಧಿಸಿದ ತನಿಕೆಯನ್ನು ಸಿಐಡಿಗೆ ವಹಿಸುತ್ತೇವೆ. ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಡಿ.ಕೆ ಶಿವಕುಮಾರ್ ಮಾತನಾಡಿ ಆರು ಜನ ಅಮಾಯಕರು ಜೀವ ಕಳೆದುಕೊಳ್ಳಲು ಸರಕಾರವೇ ನೇರ ಕಾರಣ. ಶಿವಮೊಗ್ಗದ ಹುಣಸೇಡು ಜಿಲೆಟಿನ್ ಸ್ಪೋಟದ ನಂತರವು ಸರಕಾರ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ ಮಾಡುತ್ತಿದೆ. ಸರಕಾರದ ಆಸಡ್ಡೆಗೆ ಇನ್ನೆಷ್ಟು ಅಮಾಯಕ ಜನರು ಬಲಿಯಾಗಬೇಕು ಎಂದು ಸರಕಾರದ ವಿರುದ್ದ ಗುಡುಗಿದರು.