ನೇಪಾಳದಲ್ಲಿ ಪ್ರಾರಂಭವಾದ Gen Z ನೇತೃತ್ವದ ಪ್ರತಿಭಟನೆಗಳು, ದೇಶದ ರಾಜಕೀಯ ನೆಲವನ್ನೇ ಅಲುಗಾಡಿಸಿದೆ. ನೇಪಾಳದಲ್ಲಿ ಸೆಪ್ಟೆಂಬರ್ 4ರಂದು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್‌ನಂತಹ 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು, ಅಲ್ಲಿನ ಸರ್ಕಾರ ನಿಷೇಧಿಸಿತ್ತು. ಆದ್ರೆ, ಜನರೇಷನ್ ಝಡ್ ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಪರಿಗಣಿಸಿ, ಹೋರಾಟದ ಹಾದಿ ತುಳಿದಿತ್ತು.
ಝೆನ್ ಝೆಡ್ ಅಂದ್ರೆ ಜನರೇಷನ್ ಝೆಡ್ ಎಂದರ್ಥ. 1997 ಮತ್ತು 2012 ರ ನಡುವೆ ಜನಿಸಿದವರನ್ನು ಸೂಚಿಸುತ್ತದೆ. ಈ ಪೀಳಿಗೆಯು ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಯುಗದಲ್ಲಿ ಬೆಳೆದಿದೆ. ಇದರಿಂದಾಗಿ ಜನರೇಷನ್ ಝೆಡ್ ಪೀಳಿಗೆ, ತಂತ್ರಜ್ಞಾನ-ಬುದ್ಧಿವಂತ ಮಾತ್ರವಲ್ಲದೇ, ಸಾಮಾಜಿಕ ವಿಷಯಗಳ ಬಗ್ಗೆ ಅರಿವು ಮತ್ತು ಸಕ್ರಿಯ ಎಂದು ಪರಿಗಣಿಸಲಾಗುತ್ತದೆ. ಅವರನ್ನು ಜಿಲ್ಲೆನಿಯಲ್ಸ್ ಎಂದೂ ಕರೆಯುತ್ತಾರೆ. ಇದು ಇಂದಿನ ಹೆಚ್ಚು ಮಾತನಾಡುವ ಮತ್ತು ಪ್ರಭಾವಶಾಲಿ ಪೀಳಿಗೆಯಾಗಿದೆ. ತಂತ್ರಜ್ಞಾನವು ಅವರ ಡಿಎನ್‌ಎಯಲ್ಲಿದೆ. ಅವರು ಹೊಸ ಅಪ್ಲಿಕೇಶನ್‌ಗಳು ಮತ್ತು ಅಪ್ಡೇಟ್‌ಗಳನ್ನು ಬಹಳ ಬೇಗನೆ ಅಳವಡಿಸಿಕೊಳ್ಳುತ್ತಾರೆ.
ಈ ಪೀಳಿಗೆಯನ್ನು “ಡಿಜಿಟಲ್ ನೇಟಿವ್ಸ್” ಎಂದು ಕರೆಯಲಾಗುತ್ತದೆ. ಏಕೆಂದರೆ ಅದು ಇಂಟರ್ನೆಟ್, ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಬೆಳೆದಿದೆ. ಪ್ರಪಂಚದಾದ್ಯಂತ ಸಮೀಕ್ಷೆಗಳು ಮತ್ತು ಅಧ್ಯಯನಗಳ ಪ್ರಕಾರ, ಜನರೇಷನ್ ಝಡ್ ಅನ್ನು ಜಾಗೃತ, ವೈವಿಧ್ಯತೆ-ಪ್ರೀತಿಯ, ಪರಿಸರ ಪ್ರಜ್ಞೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಪೀಳಿಗೆ ಎಂದು ಪರಿಗಣಿಸಲಾಗಿದೆ. ಅವರು ಲಿಂಗ, ಲೈಂಗಿಕ ಅಭಿವ್ಯಕ್ತಿ, ಜನಾಂಗ ಮತ್ತು ವೈಯಕ್ತಿಕ ಶೈಲಿಯ ವಿಷಯದಲ್ಲಿ ಹೆಚ್ಚು ಮುಕ್ತರಾಗಿದ್ದಾರೆ.
ಈ ಪೀಳಿಗೆಯು “ಅತಿಜ್ಞಾನ” ಭರಿತವಾಗಿದೆ. ಅವರು ಅನೇಕ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ನಿರ್ಧಾರಗಳನ್ನು, ಸ್ವತಂತ್ರವಾಗಿ ತೆಗೆದುಕೊಳ್ಳುತ್ತಾರೆ. ಮಾಹಿತಿಯ ಬಗ್ಗೆ ಹೆಚ್ಚು ಅಪ್ಡೇಟ್ ಹೊಂದಿರುತ್ತಾರೆ. ವಾಸ್ತವಿಕ ಜಗತ್ತಿನೊಂದಿಗೆ ಹೆಜ್ಜೆ ಹಾಕುತ್ತಾರೆ. ಇದು ಹವಾಮಾನ ಬದಲಾವಣೆ, ಆರ್ಥಿಕ ಅಸ್ಥಿರತೆ ಮತ್ತು ಮಾನಸಿಕ ಆರೋಗ್ಯದಂತಹ ಸಮಸ್ಯೆಗಳೊಂದಿಗೆ ಆತಂಕದ ಪೀಳಿಗೆಯೂ ಆಗಿದೆ. ಭಾರತದಲ್ಲಿ ಅಂದಾಜು 37 ಕೋಟಿ ಜನರೇಷನ್ ಝಡ್ ಸದಸ್ಯರಿದ್ದಾರೆ. ಇದು ದೇಶದ ಜನಸಂಖ್ಯೆಯ ಶೇಕಡಾ 27ಕ್ಕಿಂತ ಹೆಚ್ಚಿದೆ. ಇನ್ನು, 2025ರ ನಂತರ ಪ್ರಾರಂಭವಾಗುವ ಪೀಳಿಗೆಯನ್ನು ಜನರೇಷನ್ ಬೀಟಾ ಎಂದು ಕರೆಯಲಾಗುತ್ತದೆ. ಇದು 2025 ರಿಂದ 2039ರವರೆಗೆ ನಡೆಯುತ್ತದೆ.




