ಅಕ್ಟೋಬರ್ ವೇಳೆಗೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರ ತೆರೆಗೆ.
ತುಳುನಾಡಿನ ಜಾನಪದ ಕ್ರೀಡೆಗಳಲ್ಲಿ ಬಹುಮುಖ್ಯವಾದ ಕ್ರೀಡೆ ಕಂಬಳ. ಈ ಕಂಬಳದ ಕುರಿತು “ವೀರ ಕಂಬಳ” ಎಂಬ ಚಿತ್ರವನ್ನು ಖ್ಯಾತ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ. ಅರುಣ್ ರೈ ತೋಡಾರ್ ನಿರ್ಮಾಣ ಮಾಡುತ್ತಿದ್ದಾರೆ.ಈ ಚಿತ್ರದ ಕುರಿತು ಚಿತ್ರತಂಡ ಮಾಧ್ಯಮದ ಮುಂದೆ ಮಾಹಿತಿ ಹಂಚಿಕೊಂಡದ್ದು ಹೀಗೆ.
ನಾನು ಜನಪ್ರಿಯ ವಾರಪತ್ರಿಕೆಯೊಂದರಲ್ಲಿ “ಕಂಬಳ’ದ ಕುರಿತು ಬರುತ್ತಿದ್ದ ಬರಹಗಳನ್ನು ಓದುತ್ತಿದ್ದೆ. ಆ ವಾರಪತ್ರಿಕೆಯ ಮುಖ್ಯಸ್ಥರು ನನಗೆ ಪರಿಚಯ. ಅವರಿಂದ ಕಂಬಳದ ಬಗ್ಗೆ ಇದ್ದ ಸಾಕಷ್ಟು ಆರ್ಟಿಕಲ್ ಗಳನ್ನು ತರಿಸಿಕೊಂಡು ಓದಿ, ಇದರ ಬಗ್ಗೆ ಸಿನಿಮಾ ಮಾಡಬೇಕೆಂದು ನಿರ್ಧಾರ ಮಾಡಿದೆ. ನಂತರ ತುಳು ನಟ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಭೇಟಿ ಮಾಡಿದೆ. ಅವರಿಂದ ಕಂಬಳದ ಬಗ್ಗೆ ಸಾಕಷ್ಟು ಮಾಹಿತಿ ದೊರಕಿತು. ಅರುಣ್ ರೈ ತೋಡಾರ್ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ಮೂಡುಬಿದಿರೆ ಬಳಿ ಇದಕ್ಕಾಗಿ ದೊಡ್ಡ ಕಂಬಳದ ಮೈದಾನ ಸಿದ್ದವಾಯಿತು. ಇಪ್ಪತ್ತು ಜೊತೆ ಕೋಣ. ಒಂದು ಕೋಣ ನೋಡಿಕೊಳ್ಳಲು ನಾಲ್ಕು ಜನ. ಸಹ ಕಲಾವಿದರು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಜನ ಒಂದು ದಿನದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು.
ಕೋಣಗಳ ಮೂಡ್ ಒಂದೇ ತರಹ ಇರುವುದಿಲ್ಲ. ಅದನೆಲ್ಲಾ ನೋಡಿಕೊಂಡು ಚಿತ್ರೀಕರಣ ಮಾಡಬೇಕಿತ್ತು. ಒಂದು ಸಲ ಓಟದ ಶಾಟ್ ತೆಗೆದರೆ, ಸುಮಾರು ಒಂದು ಗಂಟೆ ವಿಶ್ರಾಂತಿ. ನಂತರ ಚಿತ್ರೀಕರಣ. ಈ ಚಿತ್ರಕ್ಕೆ ಕಥೆಯೇ ಹೀರೋ. ಅದು ಬಿಟ್ಟರೆ, ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾಗಿರುವ ಶ್ರೀನಿವಾಸ ಗೌಡ ಹಾಗೂ ನಾಟಕ ಕಲಾವಿದ ಸ್ವರಾಜ್ ಶೆಟ್ಟಿ ಕಂಬಳ ಓಡಿಸುವವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷಪಾತ್ರದಲ್ಲಿ ಆದಿತ್ಯ ಅಭಿನಯಿಸಿದ್ದಾರೆ. ರಾಧಿಕಾ ಚೇತನ್ ಪೊಲೀಸ್ ಕಮಿಷನರ್ ಆಗಿ ಕಾಣಿಸಿಕೊಂಡಿದ್ದಾರೆ. ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಾಂಜುರು ಸೇರಿದಂತೆ ಪ್ರಸಿದ್ದ ತುಳು ನಟರು ಈ ಚಿತ್ರದಲ್ಲಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಸ್ವಲ್ಪ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಖ್ಯಾತ ನಟ ಪ್ರಕಾಶ್ ರಾಜ್ ಅವರನ್ನು ಅಭಿನಯಿಸಲು ಕೇಳಿದ್ದೇವೆ. ಅವರು ಒಪ್ಪಿಗೆ ನೀಡಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ “ವೀರ ಕಂಬಳ” ನಿಮ್ಮ ಮುಂದೆ ಬರಲಿದೆ.
ಈ ಚಿತ್ರಕ್ಕೆ ದೇಸಿ ಸಂಗೀತ ಬೇಕಿತ್ತು. ಹಾಗಾಗಿ ಅಲ್ಲಿನ ಬಗ್ಗೆ ತಿಳಿದಿರುವ ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಗಿರಿ ಈ ಚಿತ್ರದ ಛಾಯಾಗ್ರಾಹಕರು. ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಈ ಚಿತ್ರ ಬರುತ್ತಿದೆ. ತೆಲುಗು, ತಮಿಳು , ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಿಗೆ ಡಬ್ ಆಗಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಗೆ ಸಿದ್ದತೆ ನಡೆಯುತ್ತಿದೆ. ವಿದೇಶಗಳಲ್ಲಿ ಪ್ರೀಮಿಯರ್ ಶೋ ನಡೆಸುವ ಯೋಜನೆಯಿದೆ ಎಂದು “ವೀರ ಕಂಬಳ” ದ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾಹಿತಿ ನೀಡಿದರು. ನಂತರ ವಿಶ್ವದಾದ್ಯಂತ ಜಯಭೇರಿ ಬಾರಿಸುತ್ತಿರುವ “ಕೆ ಜಿ ಎಫ್ ೨” ಚಿತ್ರತಂಡಕ್ಕೆ ಶುಭ ಕೋರಿದ ರಾಜೇಂದ್ರ ಸಿಂಗ್ ಬಾಬು,
ಮುಂದೆ ನಾನು ಸಹ ದರ್ಶನ್ ಅವರ ಅಭಿನಯದಲ್ಲಿ ಅದ್ದೂರಿ ಚಿತ್ರವೊಂದನ್ನು ನಿರ್ದೇಶನ ಮಾಡುತ್ತೇನೆ ಎಂದು ತಿಳಿಸಿದರು.
ನನಗೆ ತುಳು ಚಿತ್ರದಲ್ಲಿ ಅಭಿನಯಿಸುವ ಆಸೆ ಮುಂಚಿನಿಂದಲೂ ಇತ್ತು. ಏಕೆಂದರೆ ನನ್ನ ಅಜ್ಜಿ ಹಾಗೂ ಅಮ್ಮ ಇಬ್ಬರೂ ದಕ್ಷಿಣ ಕನ್ನಡದವರು. ನಾನು ಚಿತ್ರದಲ್ಲಿ ಅಭಿನಯಿಸುವ ವಿಷಯ ನನಗೆ ಗೊತ್ತಿರಲಿಲ್ಲ. ನಿರ್ಮಾಪಕರು ಈ ರೀತಿ ಪಾತ್ರವಿದೆ. ನೀವು ಮಾಡಬೇಕೆಂದರು. ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಾನು ಮೊದಲ ದಿನ ಚಿತ್ರೀಕರಣಕ್ಕೆ ಸಿದ್ದವಾಗಿ ಬಂದಾಗ ಅಲ್ಲಿದವರೆಲ್ಲ ನನ್ನ ನೋಡಿ ಆಶ್ಚರ್ಯಪಟ್ಟರು. ಚಿತ್ರ ಬಿಡುಗಡೆಯಾದಾಗ ನನ್ನ ಪಾತ್ರದ ಬಗ್ಗೆ ನಿಮಗೂ ತಿಳಿಯಬಹುದು ಎಂದರು ನಟ ಆದಿತ್ಯ.
ಎಷ್ಟೋ ಜನಕ್ಕೆ ನಾನು ತುಳುನಾಡಿನವಳೆಂದು ತಿಳಿದಿಲ್ಲ. ನನ್ನ ಮಾತೃ ಭಾಷೆ ಕೂಡ ತುಳು. ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟ ನಿರ್ದೇಶಕರಿಗೆ ವಂದನೆಗಳು. ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ ಎಂದರು ನಟಿ ರಾಧಿಕಾ ಚೇತನ್.
ನಮ್ಮ ಊರಿನಲ್ಲಿ ನಡೆಯುವ ಕಂಬಳಕ್ಕೆ ರಾಜೇಂದ್ರ ಸಿಂಗ್ ಬಾಬು ಅವರನ್ನು ಆಹ್ವಾನಿಸಲು ಕಂಬಳದ ಅಧ್ಯಕ್ಷರು ಹೇಳಿದರು. ಬಾಬು ಸರ್ ನಮ್ಮ ಊರಿಗೆ ಬಂದರು. ಅಲ್ಲಿ ಈ ಚಿತ್ರದ ಮಾತುಕತೆಯಾಗಿ, ಚಿತ್ರ ಆರಂಭವಾಯಿತು. ನಾನು ರಾಜೇಂದ್ರ ಸಿಂಗ್ ಬಾಬು ಅವರ ದೊಡ್ಡ ಅಭಿಮಾನಿ. ಅವರು ನಮ್ಮ ಚಿತ್ರ ನಿರ್ದೇಶನ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು ನಿರ್ಮಾಪಕ ಅರುಣ್ ರೈ ತೋಡಾರ್.
ನಾನು ಮೂಲತಃ ರಂಗಭೂಮಿಯವನು. ತುಳು ಭಾಷೆಯ ಸಾಕಷ್ಟು ನಾಟಕಗಳಿಗೆ ಸಂಭಾಷಣೆ ಬರೆದಿದ್ದೇನೆ. ರಾಜೇಂದ್ರ ಸಿಂಗ್ ಬಾಬು ಅವರು ನನ್ನನ್ನು ಭೇಟಿಯಾಗಿ ಈ ಚಿತ್ರಕ್ಕೆ ತುಳು ಹಾಗೂ ಕನ್ನಡದಲ್ಲಿ ಸಂಭಾಷಣೆ ಬರೆಯಲು ಹೇಳಿದರು. ಈವರೆಗೂ ನಾನು ಕನ್ನಡ ಚಿತ್ರಕ್ಕೆ ಸಂಭಾಷಣೆ ಬರೆದಿರಲಿಲ್ಲ. ಇದೇ ಮೊದಲು. ಕನ್ನಡ ಚಿತ್ರರಂಗಕ್ಕೆ ಇದು ದೊಡ್ಡ ಚಿತ್ರವಾಗುತ್ತದೆ. ತುಳು ಭಾಷೆಯಲಂತೂ ಪ್ರಚಂಡ ಯಶಸ್ಸು ಕಾಣಲಿದೆ ಎಂದು ಚಿತ್ರಕಥೆ , ಸಂಭಾಷಣೆ ಬರೆದಿರುವ ವಿಜಯ್ ಕುಮಾರ್ ಕಿಡಿಯಾಲ್ ಬೈಲ್ ತಿಳಿಸಿದರು.
ಚಿತ್ರದಲ್ಲಿ ಅಭಿನಯಿಸಿರುವ ಶ್ರೀನಿವಾಸ ಗೌಡ , ಸ್ವರಾಜ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ “ವೀರ ಕಂಬಳ” ದ ಕುರಿತು ಮಾತನಾಡಿದರು.
ಎ.ಆರ್.ಪ್ರೊಡಕ್ಷನ್ಸ್ ಲಾಂಛನದಲ್ಲಿ ಅರುಣ್ ರೈ ತೋಡಾರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ಎಸ್ .ವಿ .ರಾಜೇಂದ್ರ ಸಿಂಗ್ ಬಾಬು.
ಅರ್ ಗಿರಿ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಹಾಗೂ ಶ್ರೀನಿವಾಸ್ ಆರ್ ಬಾಬು ಸಂಕಲನವಿರುವ ಈ ಚಿತ್ರಕ್ಕೆ ವಿಜಯ್ ಕುಮಾರ್ ಕಿಡಿಯಾಲ್ ಬೈಲ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ರಾಜೇಶ್ ಕುಡ್ಲ ಅವರ ನಿರ್ಮಾಣ ನಿರ್ವಹಣೆ “ವೀರ ಕಂಬಳ” ಚಿತ್ರಕ್ಕಿದೆ.
ಆದಿತ್ಯ, ರಾಧಿಕಾ ಚೇತನ್, ಗೋಪಿನಾಥ್ ಭಟ್, ಭೋಜರಾಜ್ ವಾಮಾಂಜೂರು, ಮೈಮ್ ರಮೇಶ್, ರಾಜಶೇಖರ ಕೋಟ್ಯಾನ್, ಉಷಾ ಭಂಡಾರಿ, ಶ್ರೀನಿವಾಸ ಗೌಡ, ಸ್ವರಾಜ್ ಶೆಟ್ಟಿ, ವೀಣಾ ಪೊನ್ನಪ್ಪ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.