ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಘಟಪ್ರಭಾ ನದಿಯೂ ಕೂಡಾ ಘಟ್ಟ ಮೀರಿ ಹರಿಯುತ್ತಿದ್ದು, ಗೋಕಾಕ್ ನಗರಕ್ಕೆ ಜಲಕಂಟಕ ಎದುರಾಗಿದೆ. ಘಟಪ್ರಭಾ ನದಿಯಲ್ಲಿ ಸದ್ಯ 45 ಸಾವಿರ ಕ್ಯೂಸೆಕ್ ನೀರಿನ ಹರಿವು ಹಿನ್ನೆಲೆ ದನದ ಮಾರ್ಕೆಟ್ ಸುತ್ತ ನದಿ ನೀರು ಸುತ್ತುವರೆದಿದೆ. ಕ್ರಮೇಣ ನೀರು ಏರಿಕೆಯಿಂದಾಗಿ ಕುಂಬಾರವಾಡ, ಮಟನ್ ಮಾರ್ಕೆಟ್ ಸೇರಿ ನಾಲ್ಕು ಕಾಲೋನಿ ಮುಳುಗುವ ಭೀತಿ ಎದುರಾಗಿದೆ.
ಗೋಕಾಕ್ ನಗರಕ್ಕೆ ನೀರು ಒಳ ಬರುತ್ತಿದ್ದಂತೆ ಜನ ಭಯಭೀತರಾಗಿದ್ದಾರೆ. ಪ್ರವಾಹದ ಭೀತಿಯಿಂದಾಗಿ ಜನರಿಗೆ ದಿಕ್ಕೇ ತೋಚದಂತಾಗಿದೆ.ಪ್ರವಾಹದ ಪರಿಸ್ಥಿತಿ ನೆನೆದು ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ., ಪ್ರತಿವರ್ಷ ಮಳೆಗಾಲ ಬಂದ್ರೇ ಪ್ರವಾಹ ಎದುರಿಸುತ್ತಿದ್ದೇವೆ. ಮನೆಗಳಿಗೆ ಯಾವಾಗ ನೀರು ಹೋಗುತ್ತೆ ಅಂತಾ ಕಾಯ್ದುಕೊಂಡು ಕುಳಿತುಕೊಳ್ತೇವೆ. ಮಕ್ಕಳು, ಸಾಮಾಗ್ರಿಗಳನ್ನ ಕಟ್ಟಿಕೊಂಡು ಅಲೆದಾಡುವ ಪರಿಸ್ಥಿತಿ ಇದೆ. ಗೋಕಾಕ್ ನಗರದ ಒಳಗೆ ನೀರು ಬಂದ್ರೂ ಯಾವೊಬ್ಬ ಅಧಿಕಾರಿಗಳು ಎಚ್ಚರಿಸಿಲ್ಲ ಎಂದು ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಸ್ಥಳೀಯ ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ.