ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗ್ತಿದ್ದ ನಿಗೂಢ ಸಾವುಗಳ ಪ್ರಕರಣದ ತನಿಖೆ, ಬೆಂಗಳೂರಿಗೆ ಬಂದು ತಲುಪಿದೆ. ಮಾಸ್ಕ್‌ಮ್ಯಾನ್ ಚಿನ್ನಯ್ಯನ ಮೂಲಕ ಬುರುಡೆ ಗ್ಯಾಂಗ್ ರಹಸ್ಯ ಭೇದಿಸಲು, ಎಸ್‌ಐಟಿ ಮುಂದಾಗಿದೆ. ಧರ್ಮಸ್ಥಳದ ತಿಮರೋಡಿ ಮನೆ ಬಳಿಕ, ಸಾಮಾಜಿಕ ಹೋರಾಟಗಾರ ಟಿ. ಜಯಂತ್ ಮನೆಗೆ, ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ.
ಪೀಣ್ಯದ ಮಲ್ಲಸಂದ್ರದಲ್ಲಿ ಜಯಂತ್ ಮನೆ ಇದ್ದು, ಮೂಲೆ ಮೂಲೆಯಲ್ಲೂ ಎಸ್‌ಐಟಿ ತಡಕಾಡ್ತಿದೆ. ಧರ್ಮಸ್ಥಳದಿಂದ ಹೊರಡುವಾಗ ಚಿನ್ನಯ್ಯನ ಮುಖಕ್ಕೆ ಮಾಸ್ಕ್ ಹಾಕಿರಲಿಲ್ಲ. ಆದರೆ, ಬೆಂಗಳೂರಿಗೆ ಬರುತ್ತಿದ್ದಂತೆ ಮಾಸ್ಕ್ ಹಾಕಿಸಿ, ಮಹಜರು ಮಾಡಲಾಗ್ತಿದೆ. ಎಸ್‌ಐಟಿ ಜೊತೆ ಸೋಕೋ ಟೀಮ್ ಕೂಡ ಪರಿಶೀಲನೆ ಮಾಡ್ತಿದ್ದಾರೆ. ಪ್ರತಿಯೊಂದು ಅಂಶವನ್ನು ದಾಖಲು ಮಾಡಿಕೊಳ್ತಿದ್ದು, ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗ್ತಿದೆ.
ಧರ್ಮಸ್ಥಳದ ವಿರುದ್ಧ ಟಿ. ಜಯಂತ್ ಮನೆಯಲ್ಲೇ, ಷಡ್ಯಂತ್ರ ನಡೀತಾ ಅನ್ನೋ ಅನುಮಾನ ಬಲವಾಗಿದೆ. ಚಿನ್ನಯ್ಯ ಕೂಡ, ಬುರುಡೆಯನ್ನು ತಂದು ಕೊಟ್ಟಿದ್ದೇ ಜಯಂತ್ ಅಂತಾ, ವಿಚಾರಣೆಯಲ್ಲಿ ಹೇಳಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್‌ಐಟಿ, ಜಯಂತ್ ಮನೆಯಲ್ಲಿ ತಲಾಶ್‌ಗೆ ಮುಂದಾಗಿದೆ. ಎಸ್‌ಪಿ ಸೈಮನ್ ನೇತೃತ್ಬದ ತಂಡದಿಂದ ಸ್ಥಳ ಮಹಜರು ಮಾಡಲಾಗ್ತಿದೆ.
4 ಮನೆಗಳಿರುವ ಬಿಲ್ಡಿಂಗ್‌ನ 1 ಮನೆಯಲ್ಲಿ, ಪತ್ನಿ, ಇಬ್ಬರು ಮಕ್ಕಳ ಜೊತೆ ಜಯಂತ್ ವಾಸವಾಗಿದ್ರು. ಈ ಮನೆಯ ಮೇಲ್ಬಾಗದಲ್ಲಿ ಚಿಕ್ಕ ರೂಮ್ ಇದೆ. ಅದೇ ರೂಮ್‌ನಲ್ಲಿ ಚಿನ್ನಯ್ಯನನ್ನ ಇರಿಸಲಾಗಿತ್ತಾ ಅನ್ನೋ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗ್ತಿದೆ. ಜಯಂತ್, ಮನೆಯ ಸಮೀಪದಲ್ಲೇ ಆಯಿಲ್ ಅಂಗಡಿ ಇಟ್ಟುಕೊಂಡಿದ್ರಂತೆ. ಜೊತೆಗೆ ಆರ್‌ಎಸ್‌ಎಸ್‌ನಲ್ಲೂ ಓಡಾಡಿಕೊಂಡಿದ್ರಂತೆ. ಆಹ್ವಾನ ನೀಡಿದ್ರೆ ಕಾರ್ಯಕ್ರಮಗಳಿಗೂ ಹೋಗುತ್ತಿದ್ರಂತೆ. ಸ್ಥಳೀಯ ಬ್ಲಡ್ ಬ್ಯಾಂಕ್ ಟೀಂ ಗ್ರೂಪ್‌ನಲ್ಲೂ, ಜಯಂತ್ ಧರ್ಮಸ್ಥಳದ ಬಗ್ಗೆ ವಿಷಯಗಳನ್ನು ಹಂಚಿಕೊಳ್ಳುತ್ತಿದ್ರು. ಹೀಗಾಗಿ ಆ ಗ್ರೂಪಿನ ಇತರೆ ಸದಸ್ಯರು ಆಕ್ಷೇಪ ಎತ್ತಿದ್ರಂತೆ. ಹೀಗಂತ ಜಯಂತ್ ಸ್ನೇಹಿತರೊಬ್ಬರು ಹೇಳಿದ್ದಾರೆ. ಒಟ್ನಲ್ಲಿ ಚಿನ್ನಯ್ಯನ ಹೇಳಿಕೆ ಆಧರಿಸಿ ಟಿ. ಜಯಂತ್ ಮನೆಯನ್ನ, ಅಧಿಕಾರಿಗಳು ಜಾಲಾಡುತ್ತಿದ್ದಾರೆ.