ಕಾಂತಾರ ಚಾಪ್ಟರ್–1 ಸಿನಿಮಾ ಬಿಡುಗಡೆಯಾದ ಬಳಿಕ ಕರಾವಳಿಯಲ್ಲಿ ಕಾಂತಾರ ಚಿತ್ರ ಮತ್ತು ದೈವರಾಧನೆ ಕುರಿತ ಚರ್ಚೆ ಜೋರಾಗಿದೆ. ಚಿತ್ರವನ್ನು ನೋಡಿ ಹಲವರು ದೈವದ ವೇಷ ಧರಿಸಿ, ದೈವದ ನಡವಳಿಕೆಯನ್ನು ಅನುಕರಿಸಲು ಮುಂದಾದರು. ಥಿಯೇಟರ್‌ಗಳ ಮುಂದೆ ದೈವ ಬಂದಂತೆ ನಡೆದುಕೊಳ್ಳುವ ಈ ಕೃತ್ಯಗಳಿಂದ ದೈವರಾಧಕರಲ್ಲಿ ಆಕ್ರೋಶ ಉಂಟಾಯಿತು. ದೈವದ ಅನುಕರಣೆ ಅಪಚಾರವಾಗುತ್ತಿದೆ ಎಂಬ ಆರೋಪಗಳು ಮುಂದಿಡಲ್ಪಟ್ಟವು.
ಈ ಹಿನ್ನೆಲೆಯಲ್ಲಿ ಕೆಲ ಭಕ್ತರು ಪಿಲಿಚಂದಿ ದೈವದ ಮುಂದೆ ವಿಷಯವನ್ನು ಪ್ರಸ್ತಾಪಿಸಿದ್ದರು. ಅದಕ್ಕೆ ಪ್ರತಿಯಾಗಿ ದೈವ ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನೋಡಿಕೊಳ್ಳುತ್ತೇನೆ, ಅವರ ಹಣವೆಲ್ಲ ಆಸ್ಪತ್ರೆಗಳಲ್ಲಿ ಖರ್ಚಾಗುವಂತೆ ಮಾಡುತ್ತೇನೆ. ನನ್ನನ್ನು ಅಪಚಾರ ಮಾಡುವವರಿಗೆ ಬುದ್ಧಿ ಕಲಿಸುತ್ತೇನೆ. ನೀವು ಹೋರಾಟವನ್ನು ಮುಂದುವರಿಸಿ, ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆ ಎಂದು ಅಭಯ ನುಡಿ ನೀಡಿತ್ತು.
ಈ ನುಡಿಗಳನ್ನು ಕೆಲವರು ಕಾಂತಾರ ಸಿನಿಮಾವಿನತ್ತ ಕೊಂಡೊಯ್ದು, ದೈವ ಕಾಂತಾರ ಕುರಿತೇ ಮಾತನಾಡಿದೆ ಎಂದು ಹೇಳತೊಡಗಿದರು. ಇದರಿಂದ ವಿವಾದ ಮತ್ತಷ್ಟು ಉಲ್ಬಣವಾಯಿತು. ಆದರೆ ಮಂಗಳೂರು ತಾಲೂಕಿನ ಬಜಪೆ ಸಮೀಪದ ಪಡುಪೆರಾರ ಕ್ಷೇತ್ರದಲ್ಲಿರುವ ಬ್ರಹ್ಮ ದೇವರು ಬಲವಾಂಡಿ–ಪಿಲ್ಚಂಡಿ ದೈವಸ್ಥಾನದ ಆಡಳಿತ ಮಂಡಳಿ ಈ ಕುರಿತು ಸ್ಪಷ್ಟನೆ ನೀಡಿದೆ. ದೈವವು ಯಾವುದೇ ಚಲನಚಿತ್ರ ಅಥವಾ ಕಾಂತಾರ ಚಿತ್ರದ ಬಗ್ಗೆ ಮಾತಾಡಿಲ್ಲ. ಭಕ್ತರಿಂದ ಬಂದ ಅಪಚಾರದ ಕುರಿತು ಕೇಳಿದ ಪ್ರಶ್ನೆಗೆ ಮಾತ್ರ ದೈವವು ಸೂಕ್ತ ಅಭಯ ನುಡಿ ನೀಡಿದೆ ಎಂದು ಮಂಡಳಿ ತಿಳಿಸಿದೆ. ಈ ಮೂಲಕ ಕಾಂತಾರ–ದೈವ ವಿವಾದಕ್ಕೆ ತೆರೆ ಬಿದ್ದಂತಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ