ಶನಿದೇವರ ಮುಂದೆ ಆಣೆ ಪ್ರಮಾಣ ಮಾಡಲು ಹೋಗಿದ್ದ ವೇಳೆ ಲಾಂಗ್ ಹಾಗೂ ಮಚ್ಚುಗಳಿಂದ ನಡೆದ ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ಜನವರಿ 31ರ ರಾತ್ರಿ ನಡೆದಿದ್ದ ಈ ಘಟನೆಯಲ್ಲಿ ಮಂಜು ಮತ್ತು ನಾಗೇಶ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಜಗದೀಶ್ ಹಾಗೂ ವಿಜಯ್ ಮೇಲೆ ಲಾಂಗ್ ಮತ್ತು ಮಚ್ಚುಗಳಿಂದ ಹಲ್ಲೆ ನಡೆಸಿದ್ದು, ಈ ದೃಶ್ಯ ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಕೆಲವೇ ಗಂಟೆಗಳಲ್ಲಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಪೊಲೀಸರ ವಿಚಾರಣೆಯಲ್ಲಿ ಹಲ್ಲೆಗೆ ಕಾರಣ ಬೆಳಕಿಗೆ ಬಂದಿದೆ. ಗಾಯಾಳು ಜಗದೀಶ್ ಮತ್ತು ಬಂಧಿತ ಮಂಜು ಅವರ ಸಹೋದರಿ ನಡುವೆ ಪ್ರೀತಿ ಸಂಬಂಧ ಇರುವುದು ತಿಳಿದುಬಂದಿದೆ. ಆದರೆ ಮಂಜುಗೆ ಈ ಸಂಬಂಧ ಒಪ್ಪಿಗೆಯಾಗಿರಲಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಮಂಜು ಕಟ್ಟಿದ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ತಂಗಿಯೊಂದಿಗೆ ಜಗದೀಶ್ ಆಗಮಿಸಿದ್ದ. ಈ ವೇಳೆ ಮದುವೆಯಾಗುವವರೆಗೆ ಈ ಓಡಾಟ ಬೇಡ ಎಂದು ಪಂಚಾಯಿತಿ ನಡೆಸಲಾಗಿತ್ತು. ಪಂಚಾಯಿತಿಯ ವೇಳೆ ಹಣದ ವಿಚಾರ ಪ್ರಸ್ತಾಪವಾಗಿ, ಬೇರೊಬ್ಬರ ಹಣ ತಿಂದು ಬದುಕುತ್ತಿದ್ದೀಯಾ ಎಂದು ಜಗದೀಶ್‌ಗೆ ಮಂಜು ಆಕ್ಷೇಪ ವ್ಯಕ್ತಪಡಿಸಿದ್ದಾನೆ.
ಈ ವಿಚಾರದಿಂದ ಆಣೆ ಪ್ರಮಾಣಕ್ಕೆ ಮಾತುಕತೆ ನಡೆದಿದ್ದು, ಅದರಂತೆ ಎಲ್ಲರೂ ಶನಿದೇವರ ಮುಂದೆ ಪ್ರಮಾಣಕ್ಕೆ ಬಂದಿದ್ದರು. ಈ ವೇಳೆ ಜಗದೀಶ್ ಹಾಗೂ ವಿಜಯ್ ಜೊತೆ ಮೊದಲು ಮಾತಿನ ಜಗಳ ನಡೆದಿದ್ದು, ನಂತರ ಗಲಾಟೆ ತೀವ್ರಗೊಂಡಿದೆ.
ಬೆಳಿಗ್ಗೆಯೇ ಲಾಂಗ್ ಖರೀದಿಸಿ ಕಾರಿನಲ್ಲಿ ಇಟ್ಟುಕೊಂಡಿದ್ದ ಮಂಜು, ಗಲಾಟೆ ವೇಳೆ ಲಾಂಗ್ ತೆಗೆದು ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ತನಿಖೆ ಮುಂದುವರೆದಿದ್ದು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.




